Wednesday, October 26, 2011

ಹವ್ಯಕರ ಬದುಕು ಮತ್ತು ವಿವಾಹ - ಮನೋರಮಾ ಎಮ್. ಭಟ್

ಕಾಸರಗೋಡು ಸಹಿತವಾದ ಅಂದಿನ ದಕ್ಷಿಣ ಕನ್ನಡಲ್ಲಿರುವ ಬ್ರಾಹ್ಮಣರ ಒಂದು ವರ್ಗವನ್ನು ಹವ್ಯಕರೆಂದು ಕರೆಯುತ್ತಿದ್ದಾರೆ. ಹವ್ಯಕ ಬ್ರಾಹ್ಮಣರು ಉತ್ತರ ಕನ್ನಡಲ್ಲಿಯೂ ಇದ್ದಾರೆ. ಈ ಎರಡು ಹವ್ಯಕರ ಬದುಕು ಮತ್ತು ಕುಟುಂಬ ಜೀವನದಲ್ಲಿ ಅಲ್ಪ ಸ್ವಲ್ಪ ಭಿನ್ನತೆಯೂ ಇದೆ. ಅಂದರೆ ನಾವು ಮನೆಯಲ್ಲಿ ಆಡುವ ಭಾಷೆ, ನಮ್ಮ ಹೆಸರಿನ ಜೊತೆಗೆ ಇರುವ ಅಡ್ಡ ಹೆಸರು, ಜೀವನ ಕ್ರಮ, ಆರಾಧಿಸುವ ರೀತಿ ನೀತಿಗಳಲ್ಲಿ ವ್ಯತ್ಯಾಸವಿದೆ.

ದಕ್ಷಿಣ ಕನ್ನಡದ ಹವ್ಯಕರು ಸ್ಮಾರ್ಥರು, ಶಿವನ ಆರಾಧಕರು. ನಮ್ಮ ಕುಟುಂಬಕ್ಕೆ ಒಂದು ಗೋತ್ರವಿರುತ್ತದೆ- ವಶಿಸ್ಟ, ವಿಶ್ವಾಮಿತ್ರ, ಭಾರದ್ವಾಜ ಮುಂತಾದ ಋಷಿ ಮುನಿಗಳ ಹೆಸರುಗಳು ನಮ್ಮ ಗೋತ್ರವಾಗಿರುವುದು ಯಾಕೆ? ಬಹುಷಃ ನಮ್ಮ ಕುಟುಂಬದ ಮೂಲ ಪುರುಷರು ಅವರಾಗಿರಬಹುದೇ? ಅಥವಾ ನಮ್ಮ ಹಿರಿಯರು ಅವರ ಶಿಷ್ಯರಾಗಿರಬಹುದೇ? ಇನ್ನು ಒಂದು ಸಂಶಯ ನನ್ನ ಮನದಲ್ಲಿ ಬರುತ್ತದೆ. ಏಕೆ ಆ ಮುನಿ ಪುಂಗವರು ಒಬ್ಬ ಅನಾಥ ಗಂಡು ಮಗುವನ್ನು ದತ್ತ ಪುತ್ರನಾಗಿ ಸ್ವೀಕರಿಸಿರಬಾರದು. ಅವನ ಪೀಳಿಗೆಯವರನ್ನು ಆ ದತ್ತ ಪಿತನ ಹೆಸರಿನಿಂದಲೇ ಕರೆಯುತ್ತಿರಬಹುದೇ?

ಹವ್ಯಕರಲ್ಲಿ ಸಗೋತ್ರ ವಿವಾಹಗಳು ನಡೆಯಲು ಸ್ವಾಮಿಗಳ ಒಪ್ಪಿಗೆ ಇಲ್ಲ. ಆದರೂ ಪ್ರಾಯಶ್ಚಿತ್ತವಿಲ್ಲದ ತಪ್ಪುಗಳೂ ಇಲ್ಲವಲ್ಲ! ಈ ಸಗೋತ್ರ ಮದುವೆಯು ಕಾನೂನು (ಹವ್ಯಕರ) ರೀತಿಯಲ್ಲಿ ಒಪ್ಪಿಗೆಯಾಗ ಬೇಕಾದರೆ- ವಧುವಿನ ಹೆತ್ತವರು ತಮ್ಮ ವಿವಾಹಯೋಗ್ಯಳಾದ ಕನ್ಯೆಯನ್ನು ಬೇರೆಯ ಗೋತ್ರದವರಿಗೆ ದಾನ ನೀಡಿ - ಅವರಿಂದ ತಮ್ಮ ಮಗಳ ಕನ್ಯಾದಾನವನ್ನು ಮಾಡಿಸಿದ್ದೂ ಇದೆ. ಆದರೂ ಸೋದರಿಕೆಯ (ಅಣ್ಣನ ಮಗಳು + ಅಕ್ಕನ ಮಗ) ಸಂಬಂಧಗಳಿಗಿಂತ ಸಗೋತ್ರ ವಿವಾಹ ಖಂಡಿತ ಒಳ್ಳೆಯದೇ ಎಂದು ಬುದ್ಧಿವಂತ ಎಳೆಯರು ಹೇಳುತ್ತಿದ್ದಾರೆ.

ನಮ್ಮ ವಿವಾಹಕ್ಕೆ ಬಳಸುವ ಮಂತ್ರಗಳ ರೀತಿಗಳಿಗೆ ಸೂತ್ರಗಳಿವೆ (ಸೂತ್ರ ಅಂದರೆ ಸ್ಟೆಪ್ಸ್- ರೀತಿ, ದಾರಿ, ಇತ್ಯಾದಿ)- ಅಶ್ವಲಾಯನ ಮತ್ತು ಬೋಧಾಯನ ಸೂತ್ರಗಳು. ನಾವು ಬೋಧಾಯನ ಸೂತ್ರದಲ್ಲೇ ವಿವಾಹ ವಿಧಿಗಳನ್ನು ನೆರವೇರಿಸುತ್ತೇವೆ.
ಅಶ್ವಲಾಯನ ಮತ್ತು ಬೋಧಯನರು ವೈದಿಕ ವಿದ್ವಾಂಸರು. ನಮ್ಮ ವಿವಾಹಗಳು ನಡೆಸಲ್ಪಡುವಾಗ ನಮ್ಮ ವೈದಿಕರು ಬಳಸುವ ಮಂತ್ರಗಳನ್ನು ನಾವು (ಜನ ಸಾಮಾನ್ಯರು ಮತ್ತು ಚಿಂತನ ಶೀಲರು) ಕಿವಿಗೊಟ್ಟು ಆಲಿಸಬೇಕು. ನೀವೇ ಯೋಚಿಸಿ ಗೋತ್ರ, ಪ್ರವರ, ಆಸ್ತಿಯ ಹಕ್ಕು ಇತ್ಯಾದಿಗಳು ನಮ್ಮ ಜೀವನದಲ್ಲಿ ಪುರುಷನಿಂದಲೇ ಮುಂದಿನ ಪೀಳಿಗೆಗೆ ಹೋಗುತ್ತದೆಯಲ್ಲ. ಕನ್ಯಾದಾನವನ್ನು ಮಾಡಿದ ನಂತರ ನಿಮ್ಮ ಮಗಳು ತನ್ನ ಪತಿಯ ಗೋತ್ರ, ಕುಟುಂಬದ ಏಕ ವ್ಯಕ್ತಿಯಾಗಿ ಪತಿಗ್ರಹಕ್ಕೆ ಕಾಲಿಡುತ್ತಾಳೆ. ತಾನೇ ಕನ್ಯದಾನವನ್ನು ಕೊಟ್ಟ ನಂತರ ಅದನ್ನು ಪುನಃ ಆಕೆಯ ಹೆತ್ತವರಿಗೆ ಕಿತ್ತುಕೊಳ್ಳುವ ಅವಕಾಶ ಇದೆಯೇ- ಇಲ್ಲ, ಇಲ್ಲ ಖಂಡಿತವಾಗಿ ಇಲ್ಲ.

ಆದರೆ ವಿವಾಹದ ಮಂಟಪದಲ್ಲಿ ಹತ್ತು ಸಮಸ್ತರ ಎದುರಿನಲ್ಲಿ ಪ್ರತಿಜ್ಞಾ ಬದ್ಧನಾಗಿ ವರ ವಧುವಿನ ಕತ್ತಿಗೆ ಮಂಗಲ ಸೂತ್ರವನ್ನು ಕಟ್ಟುತ್ತಾ ಹೀಗೆ ಹೇಳುತ್ತಾನೆ "ಮಾಂಗಲ್ಯಂತಂತು ನಾನೇನ ಮಮ ಜೀವನ ಹೇತುನ, ಕಂಠೇ ಬದ್ನಾಮಿ ಸುಭಗೇ ತ್ವಂ ಜೀವ ಶರದಾ ಶತಂ".

ಓಹ್ .. ಎಂಥಾ ಸುಂದರ ಮಾತುಗಳು. ವಧುವಿನ ಹೃದಯಕ್ಕೆ ಎಷ್ಟು ಸಂತೋಷ, ತೃಪ್ತಿ, ಆನಂದವನ್ನು ನೀಡಿದ ಈ ಮಾತುಗಳಿಗೆ, ನಮ್ಮ ಸಮಾಜ ಒಂದು ನಿರ್ಧಿಷ್ಟ ಕಾಲಾವಧಿಯನ್ನು ನೀಡಿ, ಒಂದು ವೇಳೆ ಆಕೆ ಏಕಾಂಗಿಯಾಗಿರುವ ಸಮಯ ದುರದೃಷ್ಟದಿಂದ ಒದಗಿದರೆ, ಆ ಮಂಗಲಸೂತ್ರವನ್ನೂ, ಆಕೆಯ ಸುಮಂಗಲೀ ತನವನ್ನು ನಿರ್ದಯರಾಗಿ ಕಿತ್ತುಕೊಳ್ಳುವುದೇ? ವರನ ಹೇಳಿಕೆಗೆ ಬೆಲೆ ಇಷ್ತೆಯೋ?! ಇದಕ್ಕೆ ನಾನು ಎನ್ನೆನಲಿ?! (ಇದು ನನ್ನ ಜೀವನದ ಉದ್ದಕ್ಕೂ ಕಾಡುತ್ತದೆ). ಪ್ರೀತಿ, ಕರುಣೆ, ಪ್ರೇಮ, ಪರಸ್ಪರ ವಿಶ್ವಾಸದ ಸಹಜೀವನ ಗೌರವವನ್ನು ಕೊಟ್ಟು-ತೆಕ್ಕೊಳ್ಳುವುದು ಇಂಥಾ ಗುಣವುಳ್ಳ ನಮ್ಮ ಆತ್ಮ ಮತ್ತು ಪರಮಾತ್ಮ ಒಬ್ಬನೇ ಅಲ್ಲವೇ?!

ನಾವು ಜ್ಞಾನವನ್ನು ಬೆಳಸಿಕೊಳ್ಳೋಣ, ಒಳ್ಳೆಯವರಾಗಿ ಬಾಳೋಣ, ಸಹಜೀವನದಲ್ಲಿ ಕಷ್ಟ ಸುಖಗಳನ್ನು ಹಂಚಿ ಕೊಳ್ಳೋಣ, ನಾವಿಬ್ಬರು ಒಂದೇ ನಿನ್ನನ್ನು ನಾನು ಎಂದೆಂದೂ ಕೈ ಬಿಡಲಾರೆ, ನೀನು ನನ್ನ ಹೃದಯ ದೇವತೆ, ನನ್ನ ಮನೆಯ ಭಾಗ್ಯಲಕ್ಷ್ಮಿ. ಇಂಥಾ ಹೃದಯ ಸ್ಪರ್ಶಿ ಮಾತುಗಳ ವಾಗ್ದಾನವನ್ನು ನೀಡಿ, ವರ ವಧುವಿನ ಕೈ ಹಿಡಿದುಕೊಂಡು ಸಪ್ತಪದಿಯನ್ನು ತುಳಿಯುವಲ್ಲಿ ನಮ್ಮ ಹವ್ಯಕ ವಿವಾಹದ ಮುಖ್ಯ ವಿಧಿಗಳು ಮುಗಿಯುತ್ತದೆ. ಹವ್ಯಕರ ವಿವಾಹ ಸಂಪ್ರದಾಯಕ್ಕೂ ಇತರೇ ಬ್ರಾಹ್ಮಣ ವರ್ಗಗಳ ವಿವಾಹ ಸಂಪ್ರದಾಯಕ್ಕೂ ಇರುವ ವ್ಯತ್ಯಾಸವೇನೆಂದರೆ:
(೧) ಹವ್ಯಕರ ವಿವಾಹದಲ್ಲಿ ಸಾಕ್ಷಿಗೆ ಬರುವುದು 'ಜಲ', ಅಗ್ನಿ ಅಲ್ಲ.
(೨) ಹವ್ಯಕರಲ್ಲಿ ಹೋಮ ನಡೆಯುವುದು ತಾಳಿ ಕಟ್ಟಿದ ನಂತರ.
(೩) ಹವ್ಯಕರಲ್ಲಿ ಮಂಗಳಸೂತ್ರಕ್ಕೆ ಬಳಸುವುದು ಒಂದು ತಾಳಿ, ಆದರೆ ಇತರೇ ಬ್ರಾಹ್ಮಣ ವರ್ಗಗಳಲ್ಲಿ ಬಳಸುವುದು ಎರಡು ತಾಳಿ.

ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಹವ್ಯಕರ ಮಕ್ಕಳ ವಿವಾಹದಲ್ಲಿ "ವರದಕ್ಷಿಣೆ" ಎನ್ನುವ ಪದಗಳೇ ಬಳಕೆಯಲ್ಲಿಲ್ಲ. ಇದನ್ನಂತೂ ಇಲ್ಲಿನ ಹವ್ಯಕ ಹೆಣ್ಣು ಮಕ್ಕಳು ಬಹಳ ಸಂತೋಷದಿಂದ ನೆನಪಿಸುತ್ತಾರೆ, ಗೌರವಿಸುತ್ತಾರೆ. ಇದರಿಂದಾಗಿ ಹೆಣ್ಣು ಮಕ್ಕಳಿಗೆ ತಮ್ಮ ತವರಿನ ಸಂಬಂಧಗಳು ಬಹಳ ಶಾಶ್ವತವಾಗಿ ಉಳಿಯುತ್ತದೆ.

Tuesday, October 25, 2011

ಹವ್ಯಕ ಮನೆತನದವರ- ಮನೆ ಹೆಸರು : ಮನೋರಮಾ ಎಮ್. ಭಟ್

ಒಂದೇ ಊರಿನಲ್ಲಿರುವ ಸಾವಿರಾರು ಮಂದಿ ಹವ್ಯಕರು ಒಂದೇ ಮನೆಯವರಾಗುವುದು ಸಾದ್ಯವಿಲ್ಲ ಅಲ್ಲವೇ? ಆದರೂ ನಮ್ಮ ಹಿರಿಯರು ಎಲ್ಲಿಯವರು, ಎಲ್ಲಿಂದ ಬಂದವರು ಎನ್ನುವ ಪ್ರಶ್ನೆಗಳು ಏಳುವುದು ಸಹಜತಾನೆ? ಅದನ್ನು ನಿರೂಪಿಸಲು ಸುಲಭವಾಗಲು ನಮ್ಮ ಹಿರಿಯರು ಕಂಡುಕೊಂಡ ದಾರಿಯೇ ಮನೆಯ ಮೂಲ ಸ್ಥಳ ಮತ್ತು ಅದರ ಹೆಸರು. ಉದಾಹರಣೆಗೆ, ನನ್ನ ಪತಿ ಮುಳಿಯ ಮಹಾಬಲಭಟ್ಟರು. ಆದರೆ ಅವರು ಹುಟ್ಟಿದ್ದು, ಬೆಳೆದದ್ದು, ವಿದ್ಯಾಭ್ಯಾಸಕ್ಕೆ ನಾಂದಿಯನ್ನು ಹಾಡಿದ್ದು ಮಂಗಳೂರಲ್ಲೇ. ಆದರೂ ಅವರ ಹೆಸರಿನ ಜೊತೆಗೆ ಮುಳಿಯ ಎನ್ನುವ ಹೆಸರು ಇದೆ. ಮನೆಯ ಹೆಸರಿಲ್ಲದೆ ನಮಗೆ ಅಸ್ತಿತ್ವವೇ ಇಲ್ಲ! ನಮ್ಮ ಮೊಮ್ಮಕ್ಕಳು ನಿಶಾಂತ್ ಹಾಗು ರೋಹಿತ್ - ಇಬ್ಬರೂ ಅಮೇರಿಕಾದ ನಿವಾಸಿಗಳೇ ಆದರೂ ಅವರು ಮುಳಿಯ ನಿಶಾಂತ್ ಹಾಗು ಮುಳಿಯ ರೋಹಿತ್. ಮುಲಿಯದಲ್ಲಿ ಇದ್ದವರು ಮಹಾಬಲಭಟ್ಟರ ಅಜ್ಜ. ಅಲ್ಲಿ ನಮಗೆ ಒಂದು ಇಂಚೂ ನೆಲವಿಲ್ಲ, ನಮ್ಮದಾಗಿಲ್ಲ. ಆದರೂ ಹೆಸರಿದೆ - ಅದೇ ದಕ್ಷಿಣ ಕನ್ನಡ ಜಿಲ್ಲೆಯ (ಕಾಸರಗೋಡು ಸಹಿತ) ಹವ್ಯಕ ಮನೆತನದವರ ವೈಶಿಷ್ಟ್ಯ.

ಕನ್ನೆಪಾಡಿ, ಕಡಂಬಿಲ, ಮೂಡಂಬೈಲು, ಮಾಜಿಬೈಲು, ಖಂಡಿಗ, ಉಪ್ಪರಿಗಳ, ಅಡಿಬಾಯಿ, ತುಳಮರ್ವ, ಶೇಡಿಗುಮ್ಮೆ , ಚೊಕ್ಕಾಡಿ, ಉಂಡೆಮನೆ, ನೆಲ್ಲಿಕುಂಜಗುತ್ತು, ಮಂಜಳಗಿರಿ, ಗಿಳಿಯಾಲು, ನುಚುಕ್ತಿ, ಸೇಡಿಯಾಪು, ಎಡನೀರು - ಇತ್ಯಾದಿ. ಇವುಗಳೆಲ್ಲಾ ಕೇವಲ ಸ್ಥಳಗಳ ಹೆಸರುಗಳು. ಈ ಸ್ಥಳಗಳಲ್ಲಿ ನಮ್ಮ ಪೂರ್ವಜರು ಇದ್ದು - ಬದುಕನ್ನು ಮುಂದುವರಿಸುತ್ತಾ, ಆ ಸ್ಥಳವು ಕಾನೂನಿನ ರೀತಿಯಲ್ಲಿ ಅವರವರದ್ದೇ ಹಿಂದೆ ಒಂದು ಕಾಲದಲ್ಲಿ ಆಗಿದ್ದರೆ ಮಾತ್ರ ಆ ಸ್ಥಳಗಳ ಹೆಸರುಗಳು ಒಂದು ಕುಟುಂಬದ ಹೆಸರಾಗಿ ನಿಲ್ಲುತ್ತದೆ. ಇದೆ ನಮ್ಮ ನಮ್ಮ ಮನೆತನಗಳ ಹೆಸರುಗಳಾಗಿ ನಿಂತಿವೆ. ಈ ಸಂದರ್ಭದಲ್ಲಿ ಡಿ. ವಿ. ಜಿ. ಅವರ ಒಂದು ಕಗ್ಗ ನೆನಪಾಗುತ್ತದೆ -

ಅಕ್ಕಿಯೊಳಗನ್ನವನು ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನದಾರು
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ
ದಕ್ಕುವುದೇ ಜಸ ನಿನಗೆ - ಮಂಕುತಿಮ್ಮ.

ಈ ಕಾರಣಕ್ಕಾಗಿ ನಾವು ನಮ್ಮ ಆದಿ ಮನೆಯನ್ನು, ಮೊದಲ ಬಂಧುಗಳನ್ನು ಮರೆಯಲೇ ಕೂಡದು. ಬಹುಷಃ ನಮ್ಮ ಮೂಲವನ್ನು ಹುಡುಕಿಕೊಡಲು ನಮ್ಮ ಮಕ್ಕಳು, ಮೊಮ್ಮಕ್ಕಳು, ಬಂದರೂ ಆಶ್ಚರ್ಯವೇನಿಲ್ಲ . ಇದೂ ದಕ್ಷಿಣ ಕನ್ನಡದ ಹವ್ಯಕ ಬಂಧುಗಳು ನಡೆದು ಬಂದ ದಾರಿಯ ಚಿಂತನೆಗಳ ವೈಶಿಷ್ಟ್ಯ.

Monday, October 24, 2011

ಹವ್ಯಕರ ಮದುವೆಯಲ್ಲಿ ಅಡುಗೆ: ಅಂದು ,ಇಂದು - ಸವಿತಾ ಎಸ್ ಭಟ್, ಅಡ್ವಾಯಿ

ಹವ್ಯಕರ ಮದುವೆ ಎಂಬುದು ಸರಳವಾದ, ಕಡಿಮೆ ಖರ್ಚಿನ ಮದುವೆಯಾಗಿತ್ತು ಎಂದರೆ ತಪ್ಪಲ್ಲ. ಮನೆಯಂಗಳದಲ್ಲಿ ಕಂಗಿನ ಕಂಬಗಳನ್ನು ಹಾಕಿ ತೆಂಗಿನ ಮರದ ಒಣ ಮಡಲನ್ನು ಹೆಣೆದು ಮಾಡಿದ ತಟ್ಟಿಗಳನ್ನು ಹೊದೆಸಿ ಚಪ್ಪರ ಮಾಡುತ್ತಿದ್ದರು. ಅಂಗಳವನ್ನು ಚೊಕ್ಕಟಮಾಡಿ ಸೆಗಣಿ ಸಾರಿಸುತ್ತಿದ್ದರು. ಲಭ್ಯವಿರುವ ಕಂಬ ಹಾಕಿ, ಜಮಖಾನ ಹೊದೆಸಿ ಮಧ್ಯಭಾಗಕ್ಕೊಂದು ತೆಂಗಿನ ಕಾಯಿ, ಎಲೆ ಅಡಿಕೆ ಕಟ್ಟಿದರೆ ಮಂಟಪ ತಯಾರಾಗುತ್ತಿತ್ತು. ವರದಕ್ಷಿಣೆ, ಚಿನ್ನ, ಬೆಳ್ಳಿ ಎಂಬ ಖಡ್ದಾಯದ ಹೊರೆಗಲಿಲ್ಲ. ಹೆತ್ತವರು ಯಥಾಶಕ್ತಿ ತಮ್ಮ ಮಗಳಿಗೆ, ಅಳಿಯನಿಗೆ ಉಡುಗೊರೆ ಕೊಟ್ಟರೆ ಅದೇ ತೃಪ್ತಿ ತರುತ್ತಿತ್ತು.

ಅಂದಿನ ಕಾಲದ ಮದುವೆಯ ಊಟವೆಂದರೂ ಹಾಗೆ. ಸರಳವಾದ, ಆಢಂಬರವಿಲ್ಲದ ಪಾಯಸದ ಸಿಹಿಯೂಟ. ಮದುವೆಯ ಹಿಂದಿನ ದಿನವೇ ನೆರೆಕರೆಯವರು, ಹತ್ತಿರ ಸಂಬಂಧಿಗಳು ಮದುವೆ ಮನೆಗೆ ಬಂದು ಸೇರುತ್ತಿದ್ದರು. ತಮ್ಮಲ್ಲಿ ಬಳಸುತ್ತಿದ್ದ ಬಾಳೆಕಾಯಿ, ಹಲಸು, ಚೀನೀಕಾಯಿ, ಸೌತೆಕಾಯಿ ಅಲ್ಲದೆ ಹಾಲು ಮಜ್ಜಿಗೆಗಳನ್ನು ತರುತ್ತಿದ್ದರು (ಬೂದುಗುಂಬಳ ಖಂಡಿತವಾಗಿಯೂ ತರುತ್ತಿರಲಿಲ್ಲ - ಅದು ಅಪರಕ್ರಿಯೆಗಳಿಗೆ ಸೀಮಿತವೆಂಬ ನಂಬಿಕೆ).

ಪುರೋಹಿತರು ರಾತ್ರಿ ಗಣಪತಿ ಪೂಜೆ ಮಾಡಿ ನಂತರ ಮೇಲಡಿಗೆಯವರು (ಅಡುಗೆಯ ಮುಖ್ಯಸ್ತರು) ಬಾಳೆಕಾಯಿ ಹೆಚ್ಚಿ ಕಂಚಿನ ಉರುಳಿಯಲ್ಲಿ ಹಾಕುತ್ತಿದ್ದರು. ಮಗುಚಿ ಬಿದ್ದ ಹೋಳುಗಳಿಗೆ ಅನುಸಾರವಾಗಿ ಮರುದಿನ ಮದುವೆ ಕಾರ್ಯಕ್ರಮಕ್ಕೆ ಎಷ್ಟುಜನ ಸೇರಬಹುದೆಂಬ ಅಂದಾಜು ಮಾಡುತ್ತಿದ್ದರು . ಅಂದು ರಾತ್ರಿ ಪಾಯಸದ ಊಟವಿರುತ್ತಿತ್ತು. ಹೆಚ್ಚಾಗಿ ಕಡಲೆಬೇಳೆ ಪಾಯಸವನ್ನೇ ಮಾಡುತ್ತಿದ್ದರು . ಊಟದ ನಂತರ ಗಂಡಸರು ಕಳಕಟ್ಟಿ ಕುಳಿತು ತರಕಾರಿ ಹೆಚ್ಚುವುದು, ಬಾಳೆಲೆ ಕಟ್ಟು ಕಟ್ಟಿಡುವುದು, ಇತ್ಯಾದಿ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದರು. ಮಧ್ಯೆ ಮಧ್ಯೆ ಚಹಾ ಕಾಫಿಯ ಸರಬರಾಜು ಇರುತ್ತಿತ್ತು.

ಆ ಕಾಲದಲ್ಲಿ ಬೆಳಗ್ಗಿನ ಉಪಹಾರವೂ ಸರಳವಾಗಿರುತ್ತಿತ್ತು . ಅವಲಕ್ಕಿ, ಉಪ್ಪಿಟ್ಟು, ಚಹಾ, ಕಾಫಿ, ಕಷಾಯ, ಹಾಲು-ನೀರು ಇವಿಷ್ಟೇ. ಅನಂತರ ಬಾಳೆಹಣ್ಣು ಕೊಡುವುದು ಪ್ರಾರಂಭವಾಯಿತು. ದಿಬ್ಬಣಿಗರು (ಗಂಡಿನ ಕಡೆಯವರು) ಬಂದಾಗ ಕೈ ಕಾಲು ತೊಳೆಯಲು ನೀರು ಕೊಟ್ಟು ಅವರನ್ನು ಸಭೆ ಮಾಡಿ ಕುಳ್ಳರಿಸಿ ಬೆಲ್ಲ-ನೀರು, ಎಳನೀರು ಕೊಟ್ಟು "ಸರ್ವರೂ ಕ್ಷೇಮವಾಗಿ ಬಂದಿರೋ" ಎಂದು ವಿಚಾರಿಸಿಕೊಂಡು ಸ್ವಾಗತಿಸುತ್ತಿದ್ದರು. ಅನಂತರ ದಿಬ್ಬಣಿಗರಿಗೂ ಉಪಹಾರದ ವ್ಯವಸ್ತೆ ಹಿಂದಿನ ರೀತಿಯಲ್ಲೇ ನಡೆಯುತ್ತಿತ್ತು.

ಹಿಂದಿನ ಕಾಲದಲ್ಲಿ ಮಧ್ಯಾಹ್ನದ ಊಟಕ್ಕೆ ನಾಲ್ಕು ಬಗೆಯ ಪಲ್ಯ, ಕೋಸಂಬರಿ, ಮೆಣಸ್ಕಾಯಿ, ಅವೀಲು, ಚಿತ್ರಾನ್ನ, ಸಾರು, ಸಾಂಬಾರು, ಮಜ್ಜಿಗೆಹುಳಿ, ಒಂದು ವಿಧದ ಪಾಯಸ, ಮಜ್ಜಿಗೆ ನೀರು, ಉಪ್ಪಿನಕಾಯಿ, ಉಪ್ಪು, ಬೆಳ್ತಿಗೆ ಅಕ್ಕಿಯ ಅನ್ನ ಇರುತ್ತಿತ್ತು. ಐವತ್ತರ ದಶಕದ ಅಂದಾಜಿಗೆ ಕರಿದ ಹಪ್ಪಳ, ಬೆಲ್ಲದಿಂದ ಮಾಡಿದ ಸುಕ್ಕಿನುಂಡೆ ಎಂಬ ಸಿಹಿ ಕೆಲವು ಕಡೆ ಪ್ರಾರಂಭವಾಗಿತ್ತು. ಕ್ರಮೇಣ, ಸಿರಿವಂತರ ಮದುವೆಗಳಲ್ಲಿ ಹೋಳಿಗೆ, ಲಾಡು, ಸಜ್ಜಿಗೆ ಲಾಡು, ಪ್ರಾರಂಭವಾಗಿತ್ತು. ಅರವತ್ತರ ದಶಕದಲ್ಲಿ, ರಾತ್ರಿಯ ಮದುವೆಯೊಂದರಲ್ಲಿ ಜನರೇಟರ್ ಹಾಕಿಸಿ 6 ಮುಡಿ ಕಡಲೆಬೇಳೆಯ ಹೋಳಿಗೆ (ಸುಮಾರು ೧೫,೦೦೦ ಕ್ಕೂ ಮೀರಿ) ಮಾಡಿಸಿದ ದಾಖಲೆ ಇದೆ. ಅನಂತರದ ಕಾಲದಲ್ಲಿ ಎರಡೆರಡು ವಿಧದ ಪಾಯಸಗಳು ಪ್ರಾರಂಭವಾದವು. ಸಕ್ಕರೆ ಹಾಕಿ ಮಾಡುವ ಶಾವಿಗೆ ಪಾಯಸ, ಸಬಕ್ಕಿ ಪಾಯಸ, ಅಕ್ಕಿ ಪಾಯಸಗಳೂ ಪ್ರಾರಂಭವಾದವು. ಕ್ರಮೇಣ ಇಡ್ಲಿ-ಸಾಂಬಾರು, ಚಟ್ನಿ, ಜೊತೆಗೊಂದು ಸಿಹಿ, ಮಧ್ಯಾಹ್ನದ ಊಟಕ್ಕೆ ಸಿಹಿಯ ಜೊತೆಗೊಂದು ಕರಿದ ತಾಡಿ ಹೀಗೆ ಹೊಸ ಹೊಸ ಪದಾರ್ಥಗಳು ಸೇರ್ಪಡೆಯಾಗ ತೊಡಗಿದವು. ಬೋಂಡ ಬಜ್ಜಿಗಳೂ ಕಾಣಿಸತೊಡಗಿದವು. ಚಿತ್ರಾನ್ನ ಮರೆಯಾಗತೊಡಗಿತು. ಕೋಸಂಬರಿ ಕಾಣೆಯಾಯಿತು. ಪುಲಾವ್, ಘೀರೈಸ್, ಗೊಜ್ಜು, ಕುರ್ಮಗಳು ಪ್ರಾರಂಭವಾಗತೊಡಗಿತು. ಪಲ್ಯಗಳ ಸಂಖ್ಯೆ ಕ್ರಮೇಣ ಎರಡಕ್ಕೆ ಸೀಮಿತವಾಯಿತು. ಅಡುಗೆಯಲ್ಲಿನ ಐಟಂಗಳು ಹೆಚ್ಚಾದಾಗ ಅಡುಗೆಯವರಿಗೆ ಕೆಲಸದ ಹೊರೆ ಹೆಚ್ಹಾಗಿ ಅವರ ಗೊಣಗುವಿಕೆ ಪ್ರಾರಂಭವಾಗತೊಡಗಿತಂತೆ.

೭೦ರ ದಶಕದಲ್ಲಿ ಮನೆಯಲ್ಲಿ ಚಪ್ಪರಹಾಕಿ ಮದುವೆ ಮಾಡುವುದು ಕಷ್ಟಕರವೆನಿಸತೊಡಗಿದುದರಿಂದ ಮದುವೆ, ಉಪನಯನಗಳನ್ನು ದೇವಸ್ಥಾನಗಳಲ್ಲಿ, ಹಾಲ್ ಗಳಲ್ಲಿ ಮದುವೆ ನೆರವೇರಿಸುವುದು ಪ್ರಾರಂಭವಾಯಿತು. ಇದೀಗ ಮನೆಯಂಗಳದಲ್ಲಿ ಮದುವೆಯಾಗುವುದು ಅಪರೂಪವೇ ಅನ್ನಿಸಿದೆ. ಕೆಲವು ಕಡೆ ಮಾತ್ರ ವಧುಗೃಹಪ್ರವೇಶದ ಕಾರ್ಯಕ್ರಮ ಮನೆಯಂಗಳದ ಚಪ್ಪರದಲ್ಲಿ ನಡೆಯುತ್ತಿದೆಯಷ್ಟೇ.

೨೦೦೦ನೇ ಇಸವಿಯ ಅಂದಾಜಿಗೆ ಬೆಳಗ್ಗಿನ ಉಪಹಾರಕ್ಕೆ ಚಪಾತಿ, ಪೂರಿ, ಇಡ್ಲಿ, ವಡೆ, ಪತ್ರೊಡೆಗಳು ಶುರುವಾದವು. ಜೊತೆಗೆ ಸಿಹಿ ಕೂಡ ಇರುತ್ತಿದ್ದವು. ಊಟಕ್ಕೆ ಎರಡೆರಡು ಸಿಹಿಗಳು ಇರುತ್ತಿದ್ದವು. ಅನಂತರದ ದಿನಗಳಲ್ಲಿ ಖರ್ಜೂರ ಪಾಯಸ, ಒಣ ದ್ರಾಕ್ಷಿಯ ಪಾಯಸ, ಬಾಳೆಹಣ್ಣಿನ ಪಾಯಸ, ಮ್ಯಾಕ್ರೋನಿ ಪಾಯಸಗಳೆಲ್ಲ ಸೇರ್ಪಡೆಗೊಂಡವು. ಅಲ್ಲೊಮ್ಮೆ ಇಲ್ಲೊಮ್ಮೆ ಫ್ರೂಟ್ ಸಾಲಡ್ ಗಳನ್ನು ಪಾಯಸದ ಜೊತೆಗೆ ರಸಾಯನದ ರೀತಿಯಲ್ಲಿ ಪ್ರಾರಂಭವಾದದ್ದು ಇದೆ.

ಹಾಲ್-ಗಳಲ್ಲಿ ಮದುವೆ ಪ್ರಾರಂಭವಾದಾಗ ಸ್ವಾಭಾವಿಕವಾಗಿಯೇ ನೆರೆ ಕರೆಯವರು, ನೆಂಟರು ಹಿಂದಿನ ರಾತ್ರಿಯೇ ಹೋಗಿ ತರಕಾರಿ ಹೆಚ್ಚುವುದು ಕಡಿಮೆಯಾಗ ತೊಡಗಿದೆಯಲ್ಲದೆ ಊಟದ ಪಂಕ್ತಿಯಲ್ಲಿ ಬಡಿಸುವ ಕೆಲಸಕ್ಕೂ ಜನರ ಅಭಾವ ಉಂಟಾಯಿತು. ಬಂದವರಿಗೆ ಮದುವೆ ಮುಗಿಸಿ ವಾಹನವೇರಿ ತಮ್ಮ ಮನೆಗೆ ಹೋಗುವ ತರತುರಿಯಿಂದಾಗಿ ಬಡಿಸಲು ಸಮಯವಿಲ್ಲದಾಗ ತೊಡಗಿತು. ಆಗ ಅನಿವಾರ್ಯವಾಗಿ ಸುಧಾರಿಕೆಯವರು ಸಂಬಳ ಪಡೆದು ಕೆಲಸ ಮಾಡುವ ಪರಿಸ್ತಿತಿ ಉಂಟಾಯಿತು. ಪಂಕ್ತಿಯಲ್ಲಿ ಬಡಿಸುವ ಹೊರೆ ಕಡಿಮೆಯಾಗಲು 'ಬುಫ್ಫೆ' ಪದ್ಧತಿ ಮತ್ತು ಟೇಬಲ್ ಊಟದ ಪದ್ಧತಿ ಪ್ರಾರಂಭವಾಯಿತು. ಜೊತೆಗೇ, ಊಟದ ನಂತರ 'ಐಸ್-ಕ್ರೀಂ' ಕೊಡುವ ಹೊಸ ಕ್ರಮವೂ ಪ್ರಾರಂಭವಾಯಿತು. ಈಗ ಮಳೆಗಾಲ, ಚಳಿಗಾಲವೆನ್ನದೆ ಐಸ್-ಕ್ರೀಂ ಕೊಡುವುದು ಹೆಚ್ಚಿನ ಕಡೆ ಕಾಣಿಸುತ್ತದೆ. ಅದನ್ನು ಪಡೆಯಲು ನೂಕು-ನುಗ್ಗಲು, ಕಿತ್ತಾಟ, ಕಾದಾಟಗಳು ಕಾಣಿಸುವಾಗ 'ಛೆ .. ಇಂತಹದ್ದೆಲ್ಲಾ ನಮಗೆ ಬೇಕಿತ್ತೆ' ಎನಿಸುವುದೂ ಇದೆ.

ಇತ್ತೀಚಿಗೆ ಪೇಟೆ ಪಟ್ಟಣಗಳಲ್ಲಿ 'ಕೇಟರಿಂಗ್' ಮೂಲಕ, ಗುತ್ತಿಗೆದಾರರಿಗೆ ಹಣತೆತ್ತಿ ಅಡುಗೆ ಜವಾಬ್ದಾರಿ ವಹಿಸಿ ತಮ್ಮ ಹೊರೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರೆ, ಪಗಡಿ, ಗ್ಯಾಸ್, ಒಲೆ, ತಕಾರಿ, ಹಾಲು, ಹಣ್ಣು, ಇತ್ಯಾದಿ ಗಳನ್ನೂ ತಂದು ತಮ್ಮ ಕೆಲಸ ನೆರವೇರಿಸಿಕೊಡುತ್ತಾರೆ. ಮುಹೂರ್ತಕ್ಕೆ ಕೆಲವೇ ಜನರಿದ್ದರೂ ಊಟದ ಹೊತ್ತಿಗೆ ಧಾರಾಳ ಜನ ಬಂದು ನಿಂತೋ ಕುಳಿತೋ ಹರಟುತ್ತಲೋs ಉಂಡು ಐಸ್-ಕ್ರೀಂ ತಿಂದು ಬಂದಷ್ಟೇ ಧಾವಂತದಿಂದ ಜನ ಹೋಗಿಬಿಡುತ್ತಾರೆ. ಒಟ್ಟಿನಲ್ಲಿ ಸರಳವಾಗಿ, ಬಂಧು, ಬಾಂಧವರ ಸಹಕಾರದಿಂದ ಮನೆಯಂಗಳದಲ್ಲಿ ಸರಳವಾಗಿ ಸಾಗುತ್ತಿದ್ದ ಮದುವೆಯ ಮಂಗಳಕಾರ್ಯ ಇಂದು ಆಡಂಬರದ, ಧಾವಂತದ, ದುಬಾರಿಯ, ಬಡವರಿಗೆ ಅನಿವಾರ್ಯ ಹೊರೆಯೆನಿಸುವ ಕಾರ್ಯಕ್ರಮವಾಗಿ ರೂಪಗೊಂಡಿರುವುದು ವಿಪರ್ಯಾಸದ ಸಂಗತಿ.