Thursday, December 27, 2007

Vivaahita Jeevanadalli TrimataacharaNe

ಇಲ್ಲಿ ತ್ರಿಮತ ಅಂದರೆ - ದ್ವೈತ, ವಿಶಿಷ್ಟಾದ್ವೈತ ಹಾಗು ಅದ್ವೈತ.

1. ಸ್ವತಾ – ಸಮರ್ಪಣ : ತನ್ನನ್ನು ಹಾಗೂ ತನ್ನ ಸರ್ವಸ್ವವನ್ನು ಸದಾ ಸಂಪೂರ್ಣವಾಗಿ “ಭಾಗವಾದರ್ಪಿತ” ಮಾಡುವುದರಲ್ಲಿಯೇ ಅತ್ಯಂತ ಸೌಖ್ಯವನ್ನು ಕಾಣುವುದು. – ದ್ವೈತ (ಶುಶ್ರೂಷಾ ಸಂತೋಷ)

2. ಸ್ವತಾ – ಸಹಭಾಗ : ತನ್ನನ್ನು ಭಗವಲ್ಲೀಲೆಯಲ್ಲಿ ಒಂದು ಅಂಶಾಪ್ರಾಯಾನಾಗಿ, ಆ ಲೀಲಾನಂದದಲ್ಲಿ ಭಾಗಸ್ತನಾಗಬೇಕೆನ್ನುವುದು. ತುತ್ತು ಕಲಸುವಗ ಕೈ ಬೇರೆ ಬಾಯಿ ಬೇರೆ; ನಾಲಗೆ ಅದನ್ನು ಸವಿದಾಗ ಕೈ ಬಾಯಿ ಎಲ್ಲಾ ಅಂಗಗಳು ಆ ಸುಖದಲ್ಲಿ ಭಾಗಿಗಳು. – ವಿಶಿಷ್ಟಾದ್ವೈತ (ಸಾಹಚಾರ್ಯ ಸಂತೋಷ)

3. ಸ್ವತಾ - ವಿಲಾಯನ : ತಾನು ಭಗವಂತನಲ್ಲಿ ಕರಗಿಹೋಗಿ, ತಾನು ಬೇರೆಯೆಂಬ ತನ್ನತನವನ್ನೇ ಕಳೆದುಕೊಳ್ಳುವುದು. – ಅದ್ವೈತ (ತದಾತ್ಮಸ್ಯ ಸಂತೋಷ)

ಈ ಮೂರು ಲಕ್ಷಣಗಳು ಒಂದು ವಿವಾಹಿತ ಜೀವನದಲ್ಲಿ ಗಂಡ ಹೆಂಡತಿಯ ನಡುವಿನ ಸಂಬಂಧ ಹಾಗು ಪ್ರೀತಿ ಭಾವನೆಗಳಲ್ಲಿ ಕಾಣಬಹುದು.

ದ್ವೈತ:

ಇದು ಸ್ವಾಮಿ-ಸೇವಕ ರೂಪವಾದದ್ದು – ಭಕ್ತಿ. ಭಕ್ತಿಗೆ ತೃಪ್ತಿಯು ಅಭಿವ್ಯಕ್ತಿಯಿಂದ. ಅದು ಮತ್ತೇನ್ನನ್ನು ಬೇಡುವುದಿಲ್ಲ. ತಾನು ಹರಿದು “ಇಷ್ಟಾಸ್ಥಾನವನ್ನು” ಸೇರುತ್ತಿರಬೇಕು. ಇದು ಪ್ರೀತಿಯ ಸ್ವಭಾವ. ಅಂದರೆ, ಪ್ರೇಮವು ಹೃದಯದಲ್ಲಿ ಉಕ್ಕಿಹರಿಯುತ್ತದೆ, ಆಗ ಅದನ್ನು ಆದರಿಸಿ ತೆಗೆದುಕೊಳ್ಳುವವರಿಲ್ಲದೇ ಹೋದಾಗ ಬಾಳು ಸಾವಿಗಿಂತ ಕೀಳಾಗುತ್ತದೆ. ನಾವು ಯಾವ (ಯಾರ) ವಿಷಯದಲ್ಲಿ ಭಕ್ತಿ ತೋರಿಸುತ್ತೇವೋ ಆ ವಿಷಯವನ್ನು ನಾವು ಅನುಭವಿಸಿದ (ಅವರು ಅದನ್ನು ಸ್ವೀಕರಿಸಿದ) ಆನಂದವೇ ಭಕ್ತಿಗೆ ಪ್ರತಿಫಲ. ಇಂಥಾ ಪ್ರೇಮಪರವಶತೆ ಯಾವ ಸಂದರ್ಭದಲ್ಲಿ ಪ್ರಧಾನಾಂಶವಾಗಿರುತ್ತದೆಯೋ ಅದು ದ್ವೈತ ತತ್ವ (ಅಂತದ್ದು ದ್ವೈತ ಆನಂದ). ಪ್ರಿಯನು(ಪ್ರೇಯಸಿಯು) ಪ್ರೇಯಸಿಗೆ (ಪ್ರಿಯನಿಗೆ) ಪ್ರೀತಿಸೇವೆ ಮಾಡಬೇಕು, ಪ್ರೇಯಸಿಯು (ಪ್ರಿಯನು) ಪ್ರಿಯನ (ಪ್ರೇಯಸಿಯ) ಸೇವೆಯನ್ನು ಅಂಗೀಕರಿಸಬೇಕು, ಅದೇ ಪ್ರಿಯನ (ಪ್ರೇಯಸಿಯ) ಸಂತೋಷ (ಸ್ವತಾ ಸಮರ್ಪಣ ಆನಂದ).

ನಿತ್ಯ ಗೃಹ ಕೃತ್ಯದಲ್ಲಿ ಸ್ತ್ರೀಕರ್ತವ್ಯಗಳೂ ಪುರುಷಕರ್ತವ್ಯಗಳೂ ಬೇರೆ ಬೇರೆಯಾಗಿರುತ್ತದೆ. ಊದಾಹರಣೆಗೆ (ಪಾಕ ಪರಿಚಾರ್ಯಾದಿ ವಿಷಯಗಳಲ್ಲಿ ಆಕೆ ಸೇವಾಕಿ, ಆತನು ಸ್ವಾಮಿ). ಕುಟುಂಬ ಭರಣಾದಿ ವಿಷಯಗಳಲ್ಲಿ ಅವನು ಸೇವಕ, ಆಕೆ ಸ್ವಾಮಿಣಿ. ಹೀಗೆ ನಿತ್ಯಗಟ್ಟಲೆಯ ಜೀವನವೂ ದ್ವೈತ ಮರ್ಯಾದೆಯದು. ಅದರಲ್ಲಿ ಒಬ್ಬರಿಗಿನ್ನೊಬ್ಬರ ವಿಷಯದಲ್ಲಿರುವ ಪ್ರೀತಿ ಭಯ ಗೌರವಗಳು ಅವನ ಅಥವಾ ಅವಳ ಅಹಂತೆಯ ದರ್ಪವನ್ನು ಸವೆಯಿಸುತ್ತವೆ.

ತಾಸ್ಮೈವಾಹಂ: ನಾನು ಅವನಿಗೆ ಸೇರಿದವನು. – ದ್ವೈತ.

ವಿಶಿಷ್ಟಾದ್ವೈತ:

ಸದಾ ಪ್ರಿಯ-(ಸಹಾಚಾರ್ಯ) ಒಂದನ್ನೇ ಬೇಡುವುದು. ಪ್ರಣಯದ ದಾನಾದಾನಾ ದಿಂದಲೇ ಅವರ ಆನಂದ. ಪ್ರಿಯನು (ಪ್ರೇಯಾಸಿಯೂ) ಪ್ರೇಯಸಿಯ (ಪ್ರಿಯನ) ಸಾನ್ನಿಧ್ಯದಲ್ಲಿ ತನ್ನ ಪ್ರತ್ಯೇಕತ್ವವನ್ನು ಕಳೆದುಕೊಳ್ಳುತ್ತಾನೆ (ಕಳೆದುಕೊಳ್ಳುತ್ತಾಳೆ). ಪರಸ್ಪರ ನೀತಿ ಭೋಧನೆ, ಜಗಳ ಇತ್ಯಾದಿ ಜೀವನದಲ್ಲಿ ಸಹಜ. ಇಂಥಾ ಸಲಿಗೆ, ಅನ್ಯೋನ್ಯ ಅಧಿಕಾರ, ಅನ್ಯೋನ್ಯ ಸ್ವಾತಂತ್ರವೇ ಅಂತರಂಗೈಕ್ಯದ ಲಕ್ಶಣ. ಅದೇ ಸ್ವತಾ-ಸಹಭಾಗಿತ್ವ. ಗಂಡ ಹೆಂಡಿರು ಒಬ್ಬರಿಗಿನ್ನೊಬ್ಬರು ಸಮಾನರೇ; ಆದರೂ ಹೆಂಡತಿ ಗಂಡನನ್ನು ಮನಸಾ ಗೌರವಿಸುತ್ತಳೆ. ಇದು ಕಿಂಚಿತ್-ಭೇದಗರ್ಭಿತವಾದ ಅಭೇದ. ಯಾವ ಸಂಧರ್ಭಗಳಲ್ಲಿ “ಎಕತ್ವದಲ್ಲು ದ್ವಿತ್ವದ ಮರ್ಯಾದೆ” ಲಕ್ಶಣಗಳು ಕಾಣಿಸುತ್ತವೊ ಅಲ್ಲಿ “ವಿಶಿಷ್ಟಾದ್ವೈತ” ಗುಣ ಎತ್ತಿ ತೋರುತ್ತದೆ.

ದೈವ ಪೂಜೆ, ಬಂಧು-ಉಪಚಾರ, ವಿವಾಹ-ಉತ್ಸವ, ಇತ್ಯಾದಿಗಳಲ್ಲಿ ಇಬ್ಬರಿಗೂ ಅಂಶ-ಆಂಶಿ ಭಾವ. ಇಬ್ಬರಲ್ಲಿ ಯಾರೊಬ್ಬರೂ ಸ್ವಾತಂತ್ರಿಸಿ ಕೆಲಸ ನಡೆಸುವ ಹಾಗಿಲ್ಲ, ಇಬ್ಬರೂ ಬೇಕು. ಸಹಭಾಗಿತ್ವವೂ ಇಲ್ಲಿಯ ಮರ್ಯಾದೆ. ಅದೇ ವಿಶಿಷ್ಟಾದ್ವೈತದ ಮಾರ್ಗ.

ಮಮೈಿವಾಸ್ೌ: ಆವಳ ಮೇಲೆ ನನ್ನೊಬ್ಬನಿಗೆ ಹಕ್ಕು. ನಾನು ಮತ್ತೆ ಇನ್ನೊಂದು ಎಂಬ ಸ್ಮರಣೆ ಉಂಟು, ಆದರೆ, ಇನ್ನೊಂದರಲ್ಲಿ ನಾನು ಎಂಬುದು ಅಡಗಿಕೊಂಡಿದೆ ಎಂಬ ಸಂತೋಷ ಉಂಟು. - ವಿಶಿಷ್ಟಾದ್ವೈತ

ಅದ್ವೈತ:

ಅದ್ವೈತ ಭಾವನೆಯು ಪ್ರಣಯಾನುಭವದ ಪರಮೋನ್ನತಿ. ಬ್ರಹದಾರಣ್ಯಕೊಪನಿಶತ್ತಿನಲ್ಲಿ ಹೀಗೆ ಒಂದು ವರ್ಣನೆ ಇದೆ. ಇದು ಸತಿ-ಪತಿಯರ ಉಭಯೈಕ್ಯದ ನಿದರ್ಶನ. “ಪ್ರಿಯೆಯ ಗಾಢಾಲಿನ್ಗನದಲ್ಲಿರುವಾತನಿಗೆ ಹೊರಗಿನದೆಂಬುದರ ನೆನಪಿಲ್ಲ. ಒಳಗಿನದೆಂಬುದರ ನೆನಪಿಲ್ಲ. ಅವನು ತನ್ನ ಇಷ್ಟಾರ್ಥವು ಕೈಗೂಡಿದ್ದರಿಂದ ಆಸೆಗಳಿಲ್ಲದವನು. ಶೋಕದಿಂದ ದೂರವಾದವನು. ಆಗ ಅವನಿಗೆ ಯಾವ ಬಂಧುವಿನ ಸ್ಮೃತಿಯೂ ಯಾವ ಲೋಕ ಸಂಬಂಧದ ಸ್ಮೃತಿಯೂ ಇರುವುದಿಲ್ಲ. ಎಲ್ಲಾ ಅಖಂಡೈಕ್ಯವಾಗಿರುತ್ತದೆ”. ಇದೆ ಸ್ವತಾ-ವಿಲಾಯನ.

ಅತ್ಯಂತ-ಆಪ್ತತೆಯ ಹೊತ್ತಿನಲ್ಲಿ ಗಂಡ ಹೆಂಡತಿ ಬೇರೆ-ಬೆರೆತನ ಮರೆತು ಹೋಗುತ್ತಾರೆ. ಅದೇ ಸ್ವತೆಯ ಪೂರ್ಣ ವಿಲಾಯನ. ಜೀವನ ಜೀವತವು ಕರಗಿ ಹೋದಾಗ ಉಳಿಯುವುದು ಆತ್ಮ ಒಂದೇ. ಇದೆ ಅದ್ವೈತ ಭಾವನೆ.

ಸ ಏವಾಹಂ: ನಾನೇ ಅವಳು ಅವಳೆ ನಾನು. ಎರಡು ಎಂಬುದಿಲ್ಲ. ಇದು ಅದ್ವೈತ.

PS: ಪ್ರಣಯವು ಪ್ರಾರಂಭದಲ್ಲಿ “ದ್ವೈತ”, ಸರಸ ಸಲ್ಲಾಪಗಳಲ್ಲಿ “ವಿಶಿಷ್ಟಾದ್ವೈತ” ; ಪ್ರಣಯ ಶಿಖರದಲ್ಲಿ “ಅದ್ವೈತ”.