Monday, October 19, 2009

ಮನಸ್ಸು - ಡಿ ವಿ ಜಿ ಕಂಡಂತೆ.- On Manasu in Mankutimmana kagga.

ದೇಶ ಕಾಲ ವಿಭಾಗ ಮನದ ರಾಜ್ಯದೊಳಗಿರದು.
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ , ಆ ಮನಸಿನ ಏಳಿಗೆಗೆ ಕೊನೆಯೆಲ್ಲಿ?
ಮನದಿಂದ ಮನಕೆ ಹಾರುವುದು ಬಾಳಿನುರಿಯ ಕಿಡಿ. ಮನವೇ ಪರಮಾಧ್ಭುತವೋ.
ಏನ ಮಾಡಿದರೇನು, ಮನವ ತೊರೆದಿರಲಹುದೆ?
ಭೋಜನವ ನೀಡನೆನೆ ಮನ ಸುಮ್ಮನಿಹುದೇ?
ಮನವನಾಳ್ವುದು ಹಟದ ಮಗುವನಾಳುವ ನಯದೆ.
ಮನ ಕೆರಳಿದಂದು ಶಾಂತಿಯನೆ ನೀನರಸು (ಸ್ವಾಂತಮಂ ತಿದ್ದುತಿರು).
ಮನದ ಹದ ಹಾಲಿನ ತರಹ ಸೂಕ್ಷ್ಮ.
ಜನರು ಮನದ ಬಗೆ ಅರಿಯರು (ಸಂಪೂರ್ಣ ಜ್ಞಾನ ಇರುವಂತ ಕವಿ, ಶಿಲ್ಪಿ, ಕೃತಿಚತುರರೂ ಇಲ್ಲ).
ಸೃಷ್ಟಿ ಯಂತ್ರದ ಗುಟ್ಟು ಕೀಲುಗಳು - ಹೊಟ್ಟೆಯಲ್ಲಿ ಹಸಿವು, ಮನಸ್ಸಿನಲ್ಲಿ ಮಮತೆ.
ಮನಸ್ಸು ಬೆಳೆಯಲಿ ಭುಜಿಸಿ ನೂರು ನೂರನುಭವವ.

Saturday, August 8, 2009

200 Questions in Mankutimmana Kagga.

೧. ಏನು ಜೀವನದರ್ಥ?
೨. ಏನು ಪ್ರಪಂಚಾರ್ಥ?
೩. ಏನು ಜೀವ ಪ್ರಪಂಚಗಳ ಸಂಬಂಧ?
೪. ಕಾಣದಿಲ್ಲಿರ್ಪುದೇನಾನುಮುಂಟೆ, ಅದೇನು?
೫. ಜ್ಞಾನ ಪ್ರಮಾಣವೇನು?
೬. ದೇವರೆಂಬುದು ಕಗ್ಗತ್ತಲೆಯ ಗವಿಯೇ?
೭. ದೇವರೆಂಬುದು ನಾವು ಅರಿಯದ ಎಲ್ಲದರ ಒಟ್ಟು ಹೆಸರೇ?
೮. ಜಗವ ಕಾಯಲು ಒಬ್ಬನಿರಲು, ಅದರ ಕಥೆಯೇಕಿಂತು?
೯. ಸಾವು ಹುಟ್ಟುಗಳೇನು?
೧೦. ಈ ಸೃಷ್ಟಿ ಒಂದು ಒಗಟೇ?
೧೧. ಬಾಳಿನರ್ಥವದೇನು?
೧೨. ಬಗೆದು ಬಿಡಿಸುವರಾರು ಸೋಜಿಗವನಿದನು ?
೧೩. ಜಗವ ನಿರ್ಮಿಸಿದ ಕೈ ಒಂದಾದರೆ, ಏಕಿಂತು ಬಗೆಬಗೆಯ ಜೀವಗತಿ?
೧೪. ಬದುಕಿಗಾರು ನಾಯಕರು: ಏಕನೋ, ಅನೇಕರೋ, ವಿಧಿಯೋ,ಪೌರುಷವೋ, ಧರ್ಮವೋ, ಅಂಧಬಲವೋ?
೧೫. ಈ ಅವ್ಯವಸ್ಥೆಯ ಪಾಡು ಸರಿಯಾಗುವುದು ಯಾವಾಗ, ಅಥವಾ ತಳಮಳವೇ ಗತಿಯೋ?
೧೬. ಕ್ರಮವೊಂದು ವುಂಟೆ ಈ ಸೃಷ್ಟಿಯಲಿ?
೧೭. ಭ್ರಮಿಪುದೇನು ಆಗಾಗ ಕರ್ತೃವಿನ ಮನಸ್ಸು?
೧೮. ಕರ್ತ್ರುವು ಮಮತೆವುಳ್ಳವನಾಗಿದ್ದರೆ, ಜೀವಗಳು ಹೀಗೆ ಶ್ರಮ ಪಡುವುದೇಕೆ?
೧೯. ಏನು ವಿಸ್ಮಯ ಸೃಷ್ಟಿ?
೨೦. ಮಾನವನ ಗುರಿಯೇನು, ಬೆಲೆಯೇನು, ಮುಗಿವೇನು?
೨೧. ಏನರ್ಥ ಹಾಗು ಎಂದು ಕಡೆ ಈ ಪ್ರಪಂಚಕೆಲ್ಲ?
೨೨. ಏಕೆ ಈ ಹಗೆ, ಕೊಲೆ, ದಗೆ, ಈ ಧರಣಿ ಸೌನಿಕನ (ಕಟುಕನ) ಕಟುವೇ?
೨೩. ಪುರುಷ ಸ್ವತಂತ್ರತೆಯ ಪರಮ ಸಿದ್ದಿ ಧರಣಿಗೆ ರಕ್ಥಾಭಿಷೇಕ ಮಾಡುವುದೆಯೇ?
೨೪. ಕರವಾಲವನು ಪುಷ್ಪಸರವೆಂದು ಸೆಳೆದಾಡೆ, ಪರಿಮಳ ಸೂಸುವುದೆ?
೨೫. ಒಂದೇ ಗಗನ, ನೆಲ, ಧಾನ್ಯ, ನೀರು, ಗಾಳಿ, ಆದರೂ ಏಕೆ ಈ ವೈಷಮ್ಯ?
೨೬. ಕಂಡ ದೈವಕ್ಕೆಲ್ಲ ಕೈಮುಗಿವುದೇಕೆ?
೨೭. ನಾನಾ ವಸ್ತುಗಳಿಗೆ ನಾನಾ ಜನರು, ನಾನಾ ಮೌಲ್ಯ ಕಟ್ಟುವ ಈ ಅಂಗಡಿಯ ಗತಿಯೆಂತೋ?
೨೮. ಈ ಜಗದಲ್ಲಿ ಸತ್ಯತೆ ಎಲ್ಲಿಹುದು?
೨೯. ಒಂದು ವಸ್ತುವಿಗೆ ಮೊದಲು ಹಾಗು ಕೊನೆ ತೋರದಿದ್ದರೆ ನಾವು ಏನೆಂದು ಭಾವಿಸಬೇಕು?
೩೦. ಧರೆಯ ಬದುಕೇನು, ಗುರಿಯೇನು, ಫಲವೇನು?
೩೧. ಮೃಗಖಗಕಿಂತ ನರನು ಸಾಧಿಪುದೇನು?
೩೨. ನಮ್ಮ ಕಣ್ಣು ಮನಸ್ಸುಗಳೇ ನಮಗೆ ಸುಳ್ಳು ಹೇಳುವದಾದರೆ, ನಂಬುವುದಾದರೂ ಏನನ್ನು? *
೩೩. ಬ್ರಹ್ಮವೇ ಸತ್ಯವಾದರೆ, ಸೃಷ್ಟಿಯೇ ಮಿಥ್ಯವಾದರೆ, ಈ ಎರಡರ ನಡುವೆ ಸಂಬಂಧವಿಲ್ಲವೇ?
೩೪. ಸತ್ಯ, ಮಿಥ್ಯೆಯ ಹಿಂದೆ ಬಚ್ಚಿಟ್ಟುಕೊಂಡಿಹುದೆ?
೩೫. ಬ್ರಹ್ಮ ಈ ಜಗವ ರಚಿಸಿದ್ದು ಬರಿಯಾಟವೋ, ಕನಸೋ, ಅಥವಾ ನಿದ್ದೆ ಕಲರವವೋ?
೩೬. ಅವನು ಮರುಳನಲ್ಲದಿದ್ದರೆ, ಜಗದ ನಿಯಮವೇನೂ, ಗುರಿ, ಗೊತ್ತು, ಏನು?
೩೭. ನರನ ಪರೀಕ್ಷೆ ಮಾಡುವುದು ಬ್ರಹ್ಮನಿಗೆ ಆಸೆಯೇ ?
೩೮. ನಮ್ಮ ಬಾಳು ಬರೀ ಸಮಸ್ಯೆಯೇ?
೩೯. ಈ ಬಾಳಿಗೆ ಪೂರ್ಣವದೆಲ್ಲಿ?
೪೦. ಪ್ರಶ್ನೆಗಳಿಗೆ ಉತ್ತರ ಕೊಡ ಬಾರದವನ ಗುರುವೆಂದು ಕರೆಯುವೆಯ? *
೪೧. ಮೋಹ ಭ್ರಾಂತಿಗಳನ್ನು ಕವಿಸಿ, ಯೋಗ್ಯವಲ್ಲದ ಮಾರ್ಗದಲ್ಲಿ ನೂಕಿ, ಆ ಪರೀಕ್ಷೆಯಲ್ಲಿ ಗೆಲ್ಲಲಿಲ್ಲವೆಂದು ವಿಧಿ ಹೇಳುವುದು ಸರಿಯೇ?
೪೨. ಬ್ರಹ್ಮನು ವಿಶ್ವದಲ್ಲಿ ಅವತರಿಸಿದ್ದಲ್ಲಿ, ಅವನ ವೇಷಗಳೇಕೆ ಮಾರ್ಪಡುತ್ತದೆ?
೪೩. ಏಕೆ ಬ್ರಹ್ಮ ಅವಿತುಕೊಂಡಿಹನು ಕುರುಹ ತೋರದೆ? ಊಸರವಳ್ಳಿಯೇನು ?
೪೪. ಕತ್ತೆಲೆಯಲ್ಲಿ ಒಂದು ಸಣ್ಣ ಬೆಳಕಿನಹಾಗೆ ಏಕೆ ಬ್ರಹ್ಮ ನಮಗೆ ಅವನ ನಿಜರೂಪದ ಬಗ್ಗೆ ಒಂದು ಗುರುತನ್ನು ನೀಡುವುದಿಲ್ಲ?
೪೫. ಸತ್ಯಕ್ಕೆ ಮನೆಯೆಲ್ಲಿ? ಬರೀ ಶ್ರುತಿ ತರ್ಕದೊಳೊ, ಅನುಭವವೂ ಅದರ ನೆಲೆ ಯಾಗುವುದಿಲ್ಲವೇ? 50
೪೬. ಸೊಗಸಿನ ಮೂಲವೆಲ್ಲಿ? ಯೋಚಿಸುವ ನಮ್ಮ ಮನಸ್ಸಿನೊಳೊ?
೪೭. ಹುಲ್ಲಿಗೆ ಹಸಿರು ಎಲ್ಲಿಂದ ಬರುತ್ತದೆ?, ಒಂದು ಗುಣಕ್ಕೆ ಕಾರಣವೊಂದೆ?
೪೮. ಕುರುಡ ಸೂರ್ಯ ಚಂದ್ರರನು ಕಣ್ಣಿಂದ ಕಾಣುವನೇನು?
೪೯. ಮಣಿ ಮಂತ್ರ ತಂತ್ರಗಳ ಸಾಕ್ಷ್ಯಗಳೇಕೆ ಮನಗಾಣಿಸಲು ನಿನಗೆ ದೈವದಧ್ಬುತವ?
೫೦. ವ್ಯಕ್ತ ಚೇತನವ ಅಳಿವರು ವಿಜ್ಞಾನಿಗಳು, ಅವ್ಯಕ್ತ ಚೇತನವ ಅರಿತವರಾರು?
೫೧. ನರಭಾಷೆ ಬಣ್ಣಿಪುದೆ ಪರಸತ್ತ್ವ ರೂಪವನ್ನು?
೫೨. ಸೃಷ್ಟಿಯಲ್ಲಿ ಬಹುಭಾಗ ವ್ಯರ್ಥವೆನಿಸುವುದಿಲ್ಲವೇ ?
೫೩. ಮರೆತಿಹನೆ ಬೊಮ್ಮ?!!
೫೪. ಆವುದು ಇರುವಿಕೆಗೆ ಆದಿ?, ಎಂದು ಸೃಷ್ಟಿಗೆ ಮೊದಲು?
೫೫. ಮೂಲಮಂ ಕಂಡಂಗೆ ಸಂಭ್ರಾಂತಿ ಏನು?, ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆ ಅದೇನು? *
೫೬. ಜೀವಿತ, ಬ್ರಹ್ಮಾಂಡ, ಧರ್ಮ, ಕರ್ಮ, ಏನು ಇವೆಲ್ಲ? 100
೫೭. ಮೇಯವನು ಬಗೆದೇನಮೇಯ ಸುತ್ತಲುಂ ಇರಲು?
೫೮. ಜಡವೆಂಬುದೇನು? ಜೀವವೇಮ್?
೫೯. ವಿಶ್ವಸತ್ತ್ವ ನಾನೆನುವ ಚೇತನದಿ ರೂಪಗೊಂಡಿಹುದೋ? or viceversa?
೬೦. ಸೂರ್ಯ, ಚಂದ್ರ, ಭೂಮಿ - ಹಳೆಯವಿವು, ನೀನಿದರೊಳಾವುದನು ಕಳೆದೀಯೋ, ಹಳದು ಹೊಸತಲ್ಲಿ ಇರುವುದಿಲ್ಲವೇ?
೬೧. ಮಾಯೆಯ ಮಹತ್ವವೇನು?
೬೨. ಪ್ರಕೃತಿಯಿಂ ಹೊರಗಿರುವ ನರನಾರು ಸೃಷ್ಟಿಯಲಿ?
೬೩. ಗುರಿಯಿಡದ, ಮೊದಲು ಕೊನೆಯಿರದ, ದರಬಾರಿನಲ್ಲಿ ಸರಿಯೇನು ತಪ್ಪೇನು?
೬೪. ಮೂರು ರಾಜರಿರುವ (ನರ, ಕರ್ಮ ದೈವ) ಇಲ್ಲಿ, ಸರಿ ಇರೋದೇ ಆಶ್ಚರ್ಯ, ಇನ್ನು ಹೆಚ್ಚು ಕಮ್ಮಿ ಇದ್ದಾರೆ ಆಶ್ಚರ್ಯವೇನು? - 150
೬೫. ತಂದೆ ಯಾರ್, ಮಕ್ಕಳಾರ್, ನಾನೆಂಬುದೆದ್ದುನಿಲೆ ? *
೬೬. ಉತ್ಸಾಹವಿದ್ದೇನು, ವಾತ್ಸಲ್ಯವಿದ್ದೇನು, ಅಕ್ಷಿ ನಿರ್ಮಲವೇನು? * (Macbeth).
೬೭. ಕರೆದು ತಳ್ಳುವ, ತಳ್ಕರಿಸುತ (ತಬ್ಬಿಕೊಳ್ಳುತ್ತ) ಕಿಚ್ಚಿಡುವ, ತರಳತೆ (ಚಪಲ ಸ್ವಭಾವ) ಏನು ತಂತ್ರ? *
೬೮. ಮಧುರಭಾವ, ಪ್ರೇಮ, ದಯೆ, ಎಲ್ಲ ವಿಧಿಯ ಅಂಗಡಿಯಲ್ಲಿ ಕಸವೆಂದು ತಳ್ಳಿದರೆ, ಬದುಕಿನಲಿ ತಿರುಳೇನು?
೬೯. ಪ್ರಕೃತಿಗೆ ವಶನಾಗದಿಹ ನರನಾರು?
೭೦. ಅಮೃತಕಣವಂ ಮನುಷ್ಯನೆಂಬ ಮಡಿಕೆಯಲ್ಲಿ ಬಚ್ಚಿಟ್ಟು, ವಿಮರ್ಶೆ ಮಾಡುವ ಬುದ್ಧಿಗೆ ಮೋಹದ ಕನ್ನಡಕ ಹಾಕುವುದು, ಸೌಂದರ್ಯವೋ, ವಿನಯವೋ?
೭೧. ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು?, ಅಂತರಗಭೀರಗಳ ತಾನೇ ಕಂಡವನಾರು?
೭೨. ಇದಮಿತ್ಥ (ಇದು ಹೀಗೆ ಸರಿ) ಎಲ್ಲಿಹುದು ಮನುಜ ಸ್ವಭಾವದಲ್ಲಿ? 200
೭೩. ಉರಿಯುತಿರೆ ಹೊಟ್ಟೆ ಕಿಚ್ಚಾರಿಸಲು ನೀರೆಲ್ಲಿ?
೭೪. ಎದೆಯಲ್ಲಿ ನರಕವ ನಿಲಿಸೆ ನಿದ್ದೆಗೆ ಎಡೆ ಎಲ್ಲಿ?
೭೫. ಆರಿಸಲಾಗುವುದೇ ನರರು ಮತ್ಸರದ ಸಂಕಟವ?
೭೬. ಮನಸ್ಸು ಬೆಳೆದಂತೆಲ್ಲ ಹಸಿವು ಬೆಳೆವುದು, ಮನಸ್ಸಿನ ಏಳಿಗೆಗೆ ಕೊನೆಯೆಲ್ಲಿ?
೭೭. ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ, ಕುಂದುವಡೆಯದ ಸತ್ಯವ ಇಳೆಯೊಳು ಇನ್ನೆಲ್ಲಿ?
೭೮. ಹಾಳು ಹಾಳೆಲ್ಲ ಬಾಳು ಎನುತಿದ್ದರೆ, ಅದರ ಊಳಿಗವ ತಪ್ಪಿಸುವ ಜಾಣನೆಲ್ಲಿಹನು? 250
೭೯. ಪರದ ಮೆಲ್ಕಣ್ಣಿಟ್ಟು, ಈ ಧರೆ ತುಚ್ಛವೆನ್ನುತ್ತ ತೊರೆದು ಆಯಾಸಗೊಂಡರೆ ಫಲವೇನು?*
೮೦. ಹೊರಲೇ ಬೇಕಾದಂತ ಹೊರೆಗಳನ್ನ ಜರಿಯುವುದಾದರೂ ಏಕೆ?
೮೧. ಎಷ್ಟೂ ಜನ ಕಷ್ಟವೇ ಪಡದೆ ದಡವನ್ನು ಸೇರುವುದಿಲ್ಲವೇ?
೮೨. ಬಾಳು ಪಾಳೆನ್ನುವರ ಬಿಟ್ಟಿಹುದೇ ಬೆದಕಾಟ.
೮೩. ಬಾಳ ಹಳಿಯುವುದೇಕೆ?, ಗೋಳ ಕರೆಯುವುದೇಕೆ?, ಲೀಲೆಯೇಂ ಬಾಳು?
೮೪. ಮಾರೀಚ ಹರಿಣ ಅಡ್ಡಾಡಲು, ಧೃಡಮನಸ್ಕಳಾದ ಸೀತೆಯ ಮನಸ್ಸು ಚಂಚಲವಾದುದ್ದೇಕೆ?
೮೫. ಆನೆಗಾರ್, ಇರುವೆಗಾರ್, ಕಾಗೆಗಾರ್, ಕಪ್ಪೆಗಾರ್ ಕಾಣಿಸುವವರನ್ನವನು? (ಹಸಿವೆ ಅದರ ಗುರುವು)*
೮೬. ಯಮನಿಗೇಕೆ ಅಪಕೀರ್ತಿ? ನರರು ಬಲು ಕರುಣಿಗಳೇ?
೮೭. ತಿಳಿಯದೆ ಹಳಿಯುವುದೇಕೆ? (ಗಾವಿಲನ (ಮೂಢನ) ಗಳಹೇನು (ಅರ್ಥವಿಲ್ಲದ ಮಾತು))?
೮೮. ನರರ ಸ್ವಭಾವ ವಕ್ರಗಳನ್ನು ಎಣಿಸುವುದೇಕೆ?
೮೯. ತಕ್ಕುದಲ್ಲದ ಅಪೇಕ್ಷೆಗೇಕೆ ಮದ್ಯವ ಕುದಿಸುತುಕ್ಕಿಸುವನದನು ವಿಧಿ?
೯೦. ಹಟವಾದಕೆಡೆಯೆಲ್ಲಿ ಮನುಜ ಪ್ರಪಂಚದಲಿ?
೯೧. ಪಟುವಾಗಿ ನಿಲಲಹುದೆ ಮನಲೊಳೆಸಗಿದ ಗೋಡೆ? (ಕಟುತೆ ಸಲ್ಲದು ಜಗಕೆ). 300
೯೨. ಮೆಲ್ಲದೆಯೇ ಧಾವಿಸುತ ದಣಿವ ಕರುವನು ಪೋಲ್ತೊಡೆ ಎಲ್ಲಿಯೋ ಸುಖ ನಿನಗೆ?
೯೩. ಅಪ್ಪಲೆ ತಿಪ್ಪಲೇ ತಿರುಗಿ ಬಿದ್ದವ, ಸ್ವಪ್ನ ಲೋಕದಿ ತಿರೆಯ ಮರೆತವ, ತಪ್ಪು ಸರಿಗಳ ತೂಕ ಅಳಿತುಕುಳಿತವ - ಬೆಪ್ಪನಾರು ಮೂವರಲಿ?
೯೪. ಮುಂದಕೇತಕೆ ಮಿಗಿಸುವೆ ಕರ್ಮಋಣಶೇಷಗಳ, ಬಂಧಿಸಿಹನೆ ವಿಧಿ ನಿನ್ನ?
೯೫. ಕೊಂಚ ಕೊಂಚಗಳರಿವು ಪೂರ್ಣದರಿವಾದೀತೇ?
೯೬. ಸತ್ಯವೆಂಬುದೆಲ್ಲಿ?, ಸತ್ಯಾನುಭವ ಎಲ್ಲರಿಂಗೂ ಒಂದೇ ಹೇಗಾಗುವುದು?
೯೭. ನಿನ್ನ ಜೀವಿತವೆಲ್ಲ ನಿನ್ನ ಕೈಮಾಳ್ಕೆ ಏನು? ಪರರ ಪ್ರಭಾವ ಇರುವುದಿಲ್ಲವೇ?
೯೮. ರಚಿಸಿದವನಿಂತೊಡಲೊಳಿಡೆ ವಿಷಮ ಕುಟಿಲಗಳ, ಉಚಿಟವಾವುದೋ ನಿನಗೆ? * 350.
೯೯. ಹುದುಗಿಹುದು ಅದೆಲ್ಲಿ ಪರಮಾತ್ಮ ಈ ತನುವಿನಲ್ಲಿ?
೧೦೦. ಲೋಕವೆಲ್ಲವೂ ದೈವಲೀಲೆ ಎಂದರೆ, ಶೋಕ ಸೊಂಕದೆಹೋದರೆ ಆ ಲೀಲೆ ನೀರಸವೇಂ? *
೧೦೧. ಇದು ನಡೆಯಲಿಲ್ಲ ಅದು ನಿಂತುಹೋಯಿತು ಎನ್ನುತ್ತಾ ಎದೆಯುಬ್ಬೆಗವನೊಂದಿ (ಉಧ್ವೇಗ) ಕುದಿಯುವುದ್ಯಾಕೆ?, ಅಧಿಕಾರ ಪಟ್ಟವನು ನಿನಗಾರು ಕಟ್ಟಿಹರು?
೧೦೨. ಹೊಟ್ಟೆ ನೋವಿಳಿಯುತಿರೆ ರಟ್ಟೆ ನೋವೆನ್ನುವುದು, ಮಟ್ಟಸವೆ (flat) ತಿರೆಹರವು ?
೧೦೩. ............ ಕಾತರತೆ, ತಲ್ಲಣವು ನಿನಗೇಕೆ?
೧೦೪. ಅದು ಒಳಿತು ಇದು ಕೆಟ್ಟದೆಂಬ ಹಠ ನಿನಗೇಕೆ?
೧೦೫. ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ ? *
೧೦೬. ಬೇಕೆನಿಪುದೊಂದೆನಗೆ , ವಿಧಿ ಗೆಯ್ವುದಿನ್ನೊಂದು , ಈ ಕುಟಿಲಕೇಂ ಮದ್ದು?
೧೦೭. ವನದಿ ನಿರ್ಜನದಿ ಮೌನದಿ ತಪಸ್ಸನ್ನು ಮಾಡುವವನ ನೆನಪಿನಲ್ಲಿ ಹಿಂದಿನ ಅನುಭವ ಉಳಿಯದೇನು? *
೧೦೮. ಈ ಜಗದ ಗಂಧ ಪರಿಪರಿ ಹಸಿವ ಕೆಣಕುತಿರೆ, ಭೋಜನವ ನೀಡೆನೆನೆ ಮನ ಸುಮ್ಮನಿಹುದೇ?
೧೦೯. ಉದರ ದೈವಕೆ ಜಗದೊಳೆದುರು ದೈವವದೆಲ್ಲಿ?
೧೧೦. ಸುಪ್ತವಹುದೆಂತಿಚ್ಛೆ ? (ಗುಪ್ತದಲಿ ಕೊಳಿಯುತ್ತೆ ವಿಷಬೀಜವಾಗಿ).
೧೧೧. ದೇಹ, ಆತ್ಮ : ದಾಹಗೊಂಡಿರಲೊಂದು ಮಿಕ್ಕೊಂದಕೆಲ್ಲಿ ಸುಖ?
೧೧೨. ಸೌಂದರ್ಯ ಬಾಂಧವ್ಯಗಳು ಹೊಂದಿಸದೆ ಕುಂದಿಸದೆ ಜೀವಗಳನ್ನು, ಅದನ್ನು ಬರಿದು ಎನ್ನಲು ಹೇಗೆ ಸಾಧ್ಯ? 400
೧೧೩. ಅಳೆವರಾರ್ ಪೆಣ್-ಗಂಡುಗಳನೆಳೆವ ನೂಲುಗಳ?
೧೧೪. ಹೆಬ್ಬದುಕನೊಂಟಿತನದೊಳದೇನು ಬದುಕುವೆಯೋ? (ತಬ್ಬಿಕೊಳೋ ವಿಶ್ವವನು).
೧೧೫. ಶಿಲೆಯೆ ನೀ ಕರಗದಿರಲು? (ಅಳುವು, ನಗುವು ಹೃದಯದ ಬಾಗಿಲನ್ನು ತೆರೆಯುವುದು).
೧೧೬. ಕದಡದಿರ್ದೊಡೆ ಮನವ, ತನು ಸೊಗವ ಸವಿದೊಡೇ೦ ?
೧೧೭. ಸೊಗಸು ಬೇಡದ ನರಪ್ರಾಣಿ ಎಲ್ಲಿಹುದಯ್ಯ?
೧೧೮. ಸುಂದರತೆ ಎನುವುದೇನು? (nice descriptions on Beauty).450
೧೧೯. ಶುದ್ದಿಸದೆ ನಭ ಧರೆಯ ಮರಮರಳಿ ಮಳೆಯಿಂ? (ಬಿದ್ದ ಮನೆಯನು ಕಟ್ಟೊ).
೧೨೦. ಸತ್ಯವೆಂಬುದೇನು ಸೈನಿಕನ ಜೀವನದಿ? (ಸಾರ್ಥಕತೆಯಿಂ ಸತ್ಯ)
೧೨೧. ಜೀವಿ ಬೇಡದಿರೆ ದೈವವನು ಕೇಳುವರಾರು?, ದೈವ ಗುಟ್ಟಿರಿಸದಿರೆ ಜೀವಿ ಅರಸುವುದಾದರೂ ಏನು?
೧೨೨. ವಿಹಿತಗೈದವರಾರು ವಸತಿಯಂ ದೈವಕ್ಕೆ? (ಬಹುಜನ ಕೈಮುಗಿವ ತೀರ್ಥಸ್ಥಳದೊಳು ಮಹಿಮೆಯ ಬಗ್ಗೆ ಸಂಶಯಿಸಬೇಡ).
೧೨೩. ಪುಣ್ಯಕಾರ್ಯಕ್ಕೆ ಪ್ರತಿಫಲವು ಬೇರೇಕೆ? (ಸುಕೃತಕದು ತಾನೇ ಫಲ ಹಿತ ಮನದ ಪಾಕಕದು, ಪೊಂಗುವಾತ್ಮವೇ ಲಾಭ).
೧೨೪. ಹೂವು ಒಡವೆಗಳು ದೈವಕ್ಕೇಕೆ? (ಯಾವುದು ತನಗೆ ಒಳಿತೋ, ನರನು ಅದನ್ನು ಪರಮಂಗೆ ನೈವೇದಿಪುದು ಸಹಜ). 500
೧೨೫. ಸೃಷ್ಟಿಯ ಅಧ್ಬುತ ಶಕ್ತಿ ಉಳ್ಳ ಒಬ್ಬನಿರಲು, ನಮ್ಮಿಷ್ಟಗಳನು ಅರಿತು ನಮಗೆ ನೀಡುವುದು ಅವನಿಗೆ ಅರಿಯದೇನು?
೧೨೬. ಅರಿಕೆಯೆಲ್ಲವ ನಡೆಸದಿರೆ ದೊರೆಯೇ ಸುಳ್ಳಹನೆ?
೧೨೭.ನಿನ್ನೇಳು ಬೀಳುಗಳು ನಿನ್ನ ಸೊಗ ಗೋಳುಗಳು, ನಿನ್ನೊಬ್ಬನೋಸುಗವೇ ನಡೆವ ಯೋಜನೆಯೇಂ?
೧೨೮. ಎನಗೆ ಸುಖವಿಲ್ಲ ಅದರಿಂ ದೇವರಿರನೆನ್ನುವನುಮಿತಿಯ ನೀಂ ಗೆಯ್ಯೆ, ಸುಖಿ ಅದೇನೆನುವಂ?
೧೨೯. ಎಣಿಪುರಾರು ಅನುಭವವನ್ನು, ಆವ ಪ್ರಮಾಣದಲಿ? (ಮಣಲ ಗೋಪುರವೋ ಅದು )
೧೩೦. ಹಳದೆಂದು ನೀನ್ ಕಳೆಯದಿರು, ತಳಹದಿಯಲ್ಲವೇ ಅದು ನಮ್ಮೆಲ್ಲ ಹೊಸ ತಿಳಿಮಿಂಗೆ?
೧೩೧. ಕಟ್ಟಡದ ಪರಿಯನು ಇಟ್ಟಿಗೆ ಎಂದು ಕಂಡೀತು? (ಸೃಷ್ಟಿ ಕೋಟೆಯಲಿ ನೀನೊಂದು ಇಟ್ಟಿಗೆ)
೧೩೨. ಚರಣ ನಡೆವನಿತು, ಕಣ್ಣರಿವನಿತು ದೂರ ನೀಂ ಚರಿಸದಿರೆ ಲೋಪವಲ? 550
೧೩೩. ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ ನನ್ನಾಹ ಸಾಗೀತೆ? ದೈವ ಒಪ್ಪೀತೆ?
೧೩೪. ತಿಳಿವಿಗೊಳಿತೆನಿಸಿದುದು ನಡೆಯೊಳೇತಕ್ಕಿರದು? *
೧೩೫. ನಿರ್ಮಮದ ಸದ್ವಿವೇಕದ ದೀಪಕ್ಕಿಂತ ನೀನು ಆಶ್ರಯಿಸಲು ಇನ್ನೇನಿಹುದು?
೧೩೬. ನೋಡುವರ ಕಣ್ಣೊಲವ ಬೇಡುವಳೇ ಸೃಷ್ಟಿ? *
೧೩೭. ಜನುಮಜನುಮಗಳಿಂದಲೂ ಪೇಚಾಟ ತಿುಣುಕಾಟ, ಮುನಿವುದಾರಲಿ ಹೇಳು?
೧೩೮. ಮರಕ್ಕೆ ಸುಮ-ಫಲ ಮುಹೂರ್ತ ನಿಶ್ಚಿತವೇನು? (ಮತಿ, ಮನಂಗಳ ಕೃಷಿತಪ:ಫಲವೂ ಅಂತೆಯೇ).
೧೩೯. ದೂರದಲಿ ಕೊರಗುತ್ತ ಬಾಳ್ವ ಬಾಳ್ಗೇನು ಬೆಲೆ? (ಹೋರಿ ಸತ್ತ್ವವ ಮೆರಸು)
೧೪೦. ದೇವರದಿದೆಲ್ಲ, ದೇವರಿಗೆಲ್ಲ ಎಂದು ಕೂಗುತ, ಆವುದನೂ ಅವನ ನಿರ್ಣಯಕ್ಕೆ ಬಿಡದೇ, ದಾವಂತಪಡುತ ತನ್ನ ಇಚ್ಛೆಯನೇ ಘೋಷಿಸುವ ಭಾವವೆಂತ: ಭಕುತಿ?
೧೪೧. ಕೊರೆಯಾದೊಡೇನೊಂದು ನೆರೆದೊಡೇನಿನ್ನೊಂದು ? (ಒರಟು ಕೆಲಸವೋ ಬದುಕು).
೧೪೨. ಫಲವೇನು ಹೆಣಗಾಡಿ ಹೋರಾಡಿ ಧರೆಯೊಳಗೆ? (ಗಲಿಬಿಲಿ ಈ ಬಾಳು ಎನಬೇಡ). See the next two.
೧೪೩. ಜಟ್ಟಿ ಕಾಳಗದಿ ಗೆಲ್ಲದೊಡೆ, ಗರಡಿಯ ಸಾಮು ಪಟ್ಟು ವರಸೆಗಳೆಲ್ಲ ವಿಫಲವೆನ್ನುವೆಯೇ೦.? (ಗಟ್ಟಿತನ ಗರಡಿ ಫಲ).
೧೪೪. ವರ ಸಧ್ಯಕಿಲ್ಲದೊಡೆ ಬರಿದಾಗುವುದೇ ಪೂಜೆ?
೧೪೫ . ಬಿಡುವಿಲ್ಲದೆಯೇ ಜೀವಿಯು ಅಂಗಡಿಯ ಸರಕುಗಳನ್ನು (ಜೀವನದ ಲಾಭ ನಷ್ಟ) ಎಣಿಸೆ , ಕಡೆಯೆಂದು?
೧೪೬. ಬದುಕೊಂದು ಕದನವೆಂದು ಅಂಜಿ ಬಿಟ್ಟೋಡುವನು, ಬೀದಿಯ ಬಾಯಿಗೆ ಕವಳವಾಗದೇ ಉಳಿಯುವನೆ? 600
೧೪೭. ಉದರಶಿಖಿ ಒಂದುಕಡೆ ಹೃದಯಶಿಖಿ ಇನ್ನೊಂದುಕಡೆ ಕುದಿಸದಿದ್ದರೆ, ಜೀವಶಿಲೆ ಮೃದುವಾಗುವುದೆಂದು?
೧೪೮. ಅತಿಶಯದ ಪ್ರೇಮವಿರದ ದಾಂಪತ್ಯ ವರ್ಧಿಸದು, ವ್ಯಾಮೋಹಕ್ಕೆ ಎಡೆಮಾಡಿಕೊಟ್ಟರೆ ನಿಗಳವಹುದು (ಸಂಕೋಲೆ). ಸಾಮರಸ್ಯವನ್ನು ಎಂದು ಕಾಣುವುದು ಈ ವಿಷಮದಲಿ (ಆಮಿಷದ ತಂಟೆಯದು).
೧೪೯. ಜಯಿಸಿ ಮದನನ ಬಳಿಕ ತನ್ನೊಡಲೊಳು ಉಮೆಯ ಅನ್ವಯಿಸಿಕೊಂಡಿಹುದೇನು?
೧೫೦. ಪ್ರತ್ಯೇಕ ಸುಖವ, ನೀಂ ಪ್ರತ್ಯೇಕ ಸಂಪದವ ಅತ್ಯಾಷೆಯಿಂದರಿಸಿ ಮಿಕ್ಕೆಲ ಜಗವನು ಒತ್ತಟ್ಟಿಗಿಡುವೆನೆನೆ ನಷ್ಟವಾರಿಗೋ ಮರುಳೆ? (ಬತ್ತುವುದು ನಿನ್ನಾತ್ಮ)
೧೫೧. ನೋವಿಲ್ಲದವರು ನೊಂದವರನು ಸಂತೈಸುತಿರೆ ಜೀವನವು ಕಡಿದಹುದೆ?
೧೫೨. ಪರಿಣಾಮದಲಿ ಧನಿಕ ಬಡವ ಇಬ್ಬರು ಒಂದೆ, ಕರುಬು ಕೊರಗೇತಕೆಲೋ?
೧೫೩. ಕಂಬನಿಯನಿಡುವ ಜನ ದೇವರ ನಂಬಲೊಲ್ಲದರೇ೦?, ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ? (ತುಂಬು ವಿರತಿಯ ಮನದಿ)
೧೫೪. ಕೊರತೆಯೊಂದನು ನೀನು ನೆನೆನೆನೆದು ಕೆರಳಿ ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ ನರಳುವುದು ಬದುಕೇನೋ?
೧೫೫. ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ ರಗಳೆಗಾರಿಗೆ ಬಿಡುವೋ? 650
೧೫೬. ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ, ದಕ್ಕುವುದೇ ನಿನಗೆ ಜಸ?
೧೬೦. ಬಿರುದಗಳಿಸಲಿಕೆಸಪ, ಹೆಸರ ಪಸರಿಸಲೆಸಪ ದುರಿತಗಳಿಗೆ ಎಣೆ ಉಂಟೆ?
೧೬೧. ಉದ್ಧರಿಸುವೆನು ಜಗವನು ಎನ್ನುತಿಹ ಸಖನೆ ನಿನ್ನುದ್ಧಾರ ಎಷ್ಟಾಯ್ತೋ?
೧೬೨. ಬರುವೆಲ್ಲ ಬೇನೆಗಂ ಮದ್ದನಾರಿರಿಸಿಹರು? ನರರ ಕೀಳ್ತನಕೆಲ್ಲ ಪರಿಹಾರವೆಂತು?
೧೬೩. ಹುಟ್ಟಿದವರೆಲ್ಲ ಸಾಯದೆ ನಿಲ್ಲೇ ಹೊಸತಾಗಿ ಹುಟ್ಟುವವರಿಗೆ ಎಡೆ ಎಲ್ಲಿ?
೧೬೪. ನೀನು ಎಷ್ಟು ಉಂಡರೇನು? (ಪುಷ್ಟಿ ಮೈಗಾಗುವುದು ಹೊಟ್ಟೆ ಜೀರ್ಣಿಸುವಷ್ಟೇ)
೧೬೫. ಶಿಶುಗಳ ಅವಲಕ್ಕಿ ಬೆಲ್ಲದ ಸಂಭ್ರಮವ ನೋಡಿ ಹಸಿವನು ಹೊಂದುವನೆ ಹಿರಿಯನು? (ವಿಷಯಪೂರಿತ ಲೋಕವನ್ನು ಅನಾಸಕ್ತಿಯಿಂದ ನೋಡುವವನೆ ಜಾಣ)
೧೬೬. ಪುಸ್ತಕದ ಚಿತ್ರದಿಂದ ಊಹಿಸುವೆಯ ಹಿಮಗಿರಿಯ ವಿಸ್ತಾರದ ಅದ್ಭುತವ? (ಪೂರ್ಣ ವಸ್ತು ಗ್ರಹಣವು ಅಪರೋಕ್ಷದಿಂದಹುದು)
೧೬೭. ತತ್ವ ಒಂದರ ಹಿಡಿತಕ್ಕೆ ಒಗ್ಗದಿಹ ಬಾಳೇನು? (ಕಿತ್ತ ಗಾಳಿಯ ಪಟವೋ)
೧೬೮. ಇಂದ್ರಿಯಾತೀತವನು ಹಿಡಿಯಲು ಇಂದ್ರಿಯಗಳಿಗೆ ಸಾಧ್ಯವೇ?
೧೬೯. ಶರನಿಧಿಯನು ಈಜುವವನು ಸಮರದಲಿ ಕಾದುವವನು ಗುರಿಯೊಂದನು ಬಿಟ್ಟು ಬೇರೆಯೊಂದನು ನೋಡುವನೆ?
೧೭೦. ಎಡವದೆಯೇ ಮೈ ಗಾಯವಡೆಯದೆಯೆ ಮಗುವಾರು ನಡೆಯ ಕಲಿತವನು? (ಮತಿ ನೀತಿ ಗತಿಯುಂ ಅಂತು)700
೧೭೧. ದೊರೆತನದ ಜಟಿಲಗಳ ಕುಟಿಲಗಳ ಕಠಿಣಗಳ ಭರತನು ಉಳಿಸಿದನೆ ರಾಮನ ತೀರ್ಪಿಗೆಂದು?
೧೭೨. ಮೃತನ ಸಂಸಾರ ಕಥೆ ಶವ ವಾಹಕರಿಗೇಕೆ? (ಧೃತಿಯ ತಳೆ ನೀನಂತು)
೧೭೩. ತನ್ನ ಶಿಳುಬೆಯನು ತಾನೇ ಹೊತ್ತನಲ ಗುರು ಯೇಸು? (ನಿನ್ನ ಕರ್ಮದ ಹೊರೆಯ ಬಿಡದೇ ನೀನೆ ಹೊರು)
೧೭೪. ಅಳಲು ದುಗುಡಗಳ ನಿನ್ನೊಳಗೆ ಬಯ್ತಿಡದೆ ನೀನಿಳೆಗೆ ಹರಡುವುದೇಕೋ?
೧೭೫. ಆವ ಕಡೆ ಹಾರುವುದೋ ಆವ ಕಡೆ ತಿರುಗುವುದೋ ಸಿಕ್ಕಿದ್ದುದನು ಉಣ್ಣುವುದು ಬಾನೊಳು ಆಡುವ ಹಕ್ಕಿಗೆ ನಿತ್ಯಾನುಭವ ನೀನಿದನು ಮೀರಿಹೆಯ?
೧೭೬. ಭವಿಕ ನಿನಗೆಷ್ಟಿಹುದೋ ಮರೆತು ಪರರ ಯಶ, ಧನ ಕಂಡು ಕೊರಗುವುದು ಶಿವನಿಗೆ ಕ್ರಿತಜ್ಞತೆಯೇ? 750
೧೭೭. ಮತಿಗರ್ಥವಾದೊಡೇ೦? (ಸ್ಮೃತಿಯೊಳು ನೆಲಸಿರಲಿ, ಸತತ ಸಂಧಾನದಲಿ ಪರಮಾರ್ಥವಿರಲಿ)
೧೭೮. ತಾಮಸಿಗೆ ವರವೆಲ್ಲಿ? (ಮಹಿಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು)
೧೭೯. ಕಾಳನ್ನು ಉದಯದಿ ಬಿತ್ತೆ ಸಂಜೆಗದು ಪೈರಹುದೇ? (ತಾಳ್ಮೆಯೇ ಪರಿಪಾಕ)
೧೮೦. ನಿರಾಷೆಯಲಿ ನಿಂತಿರುವವನಿಗೆ ದೇವತೆಗಳಿ೦ದೇನು? ವೈರಾಗ್ಯಪಥಿಕಂಗೆ ನಷ್ಟ ಭಯವೇನು? ಪಾರಂಗತನ ಅಂತರಾಳ ದೂರಗಳೇನು? (ಇಷ್ಟ ಬಂದ ದಾರಿ ಅವನದು)
೧೮೧. ಪೂರ್ಣತೆಗೆ ಸೊಟ್ಟೇನು? (ಉನ್ನತದ ಶಿಖರದಿಂ ತಿಟ್ಟೇನು ಕುಳಿಯೇನು) 800
೧೮೨. ಶುಭವಾವುದು ಅಶುಭವಾವುದು ಲೋಕದಲಿ ನೋಡೆ?. (ವಿಭಜಿಸಲಿಕ್ಕೆ ಆಗದ ಅನ್ಯೋನ್ಯ ಸಂಬಂಧ).
೧೮೩. ಮಣಿಕನಕ ಸಂಕೋಲೆ ತನುವ ಬಂಧಿಸದೇಂ? (ಮನ ಸರ್ವಸಮವಿರಲಿ)
೧೮೪.ಸಾತ್ವಿಕದಿ ಬಾಳ್ದವನ್ಗೆ ಎತ್ತಲೇ೦ ಭಯವಿಹುದು?
೧೮೫. ಮೇಲು ಬೀಳುಗಳು ಆರಿಗೆ ಅದು ಎಂತೋ ನೀನೇನರಿವೆ? (ತಾಳದಿರು ಗುರುತನವ, ಬೀಳಿಸದಿರೆಲೋ ನಿನ್ನ ನೆರಳ ಇತರರ ಮೇಲೆ) see next three..
೧೮೬. ಪೆರತೊಂದು ಬಾಳ ನೀನಾಳ್ವ ಸಾಹಸವೇಕೆ? (ಹೊರೆ ಸಾಲದೇ ನಿನಗೆ)
೧೮೭. ಮರದಿ ಮೊಗ್ಗು ನೈಜದಿಂದ ಅರಳಿದರೇನೆ ಸೊಗಸು ಎಲ್ಲರಿಗೆ, ಸೆರೆಮನೆಯ ಕ್ಷೇಮವೇಂ?
೧೮೮. ಒಳಿತರೊಳೆ ನೀಂ ಬಾಳು; ಪರವದೆಂತಿರ್ದೋಡೇ೦ ? 850
೧೮೯. ಸರ್ವ ಹಿತವೊಂಡುಂತೆ? (ಸುಲಭವಲ್ಲ ನರ ಲೋಕ ಹಿತ ನಿರ್ಧಾರ)
೧೯೦. ವಿಲವಿಲನೆ ಚಪಲಿಸುವ ಮನುಜ ಸ್ವಭಾವದಲಿ ನೆಲೆ-ಗೊತ್ತು ಹಿತಕೆಲ್ಲಿ?
೧೯೧. ಹೃದಯವೊಳಿತಾದೊಡೇ೦?, ತಿಳಿವಿಹುದೆ? ಜಾಣಿಹುದೇ?
೧೯೨. ಪರಿಪೋಶಿಸದೆ ನಿನ್ನೊಡಲ ದಾರಿಮರದ ಫಲ? ಕಿರಿಜಾಜಿ ಸೊಗಕುಡದೆ?
೧೯೩. ಲವಲೇಶಮಾನುಮಿರದಿರೆ ಕಹಿ ಜೀವನದಿ ನಿದ್ರಿಸುವನೆ ನರನು?
೧೯೪. ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ ಕುಲುಕಿ ಹಾಸಿಗೆಯನರಸೆನುವುದು ಅಪಕೃತಿಯೇ (Misdeed)? (ಒಳಿತನೆಸಗುವೆನೆಂದು ನಿಮ್ಮದಿಯ ನುಂಗದಿರು, ಸುಲಭವಲ್ಲ ಒಳಿತೆಸಗೆ).
೧೯೫. ಒಡೆಯದಿರು ತಳಹದಿಯ ಸರಿಪಡಿಪೆನದನೆಂದು ಸಡಿಲಿಸುವ ನೀಂ ಮರಳಿ ಕಟ್ಟಲರಿತವನೇಂ? (ದುಡುಕದಿರು ತಿದ್ದಿಕೆಗೆ)
೧೯೬. ಸ್ವಪ್ನ ಲೋಕವ ಜಾಗೃತಂ ಸುಳ್ಳೆನುದನಲ್ತೆ? (ಸುಪ್ತಂಗೆ ಜಾಗೃತನ ಲೋಕ ಸುಳ್ಳೆ)
೧೯೭. ಜಗದಿ ಜಗತ್ವವನು ಮಾಯಾ ವಿಚಿತ್ರವನು ಒಗೆದಾಚೆ ಬಿಸುಡೆಲ್ಲ ಇಂದ್ರಿಯ ಗೋಚರ ಪ್ರಪಂಚವನು ಮಿಗುವುದೇಂ? (ಆಕಾರ ಮತ್ತು ನಾಮ ಇಲ್ಲದ ವಸ್ತು) 900
೧೯೮. ತನ್ನ ಹೊಟ್ಟೆಯ ಚಿಂತೆಯೇ೦ ಮೊದಲು ಮನೆತಾಯ್ಗೆ? (ತ್ಯಜಿಸಿ ಭುಜಿಸಲ್ ಕಲಿತವನೆ ಜಗಕೆ ಯಜಮಾನ)
೧೯೯. ಬ್ರಹ್ಮ ಹೃದಯದಿ ನಿಲ್ಲೆ ಮಾಯೆಯೇ೦ಗೈದೊಡೇ೦?
೨೦೦. ನಿನಗಾರು ಗುರುವಹರು? ಗುರು ಶಿಷ್ಯ ಪಟ್ಟಗಳು ನಿನಗೇಕೆ? (ನಿನಗೆ ನೀನೆ ಗುರುವೋ) 945

Tuesday, July 28, 2009

ಅಧ್ಯಾರೋಪ - ಅಪವಾದ: A teaching technique.

"ಅಧ್ಯಾರೋಪ" ವೆಂದರೆ ವಸ್ತುವಿನ ಮೇಲೆ ಅದರಲ್ಲಿ ನಿಜವಾಗಿಲ್ಲದ ಗುಣವನ್ನು ಆರೋಪಣೆ (Impose) ಮಾಡುವುದು. ಇಲ್ಲಿ "ಅಪವಾದ" ಎಂದರೆ ಹೇಳಿದ್ದನ್ನು ಅಳಿಸಿಹಾಕುವುದು. ಇದು ಒಂದು ಬೋಧನೋಪಾಯ. ಇದರ ವಿಧಾನ: ಒಂದು ವಸ್ತುವನ್ನು ಕುರಿತು ಏನೂ ತಿಳಿಯದವನಿಗೆ , ಆ ವಸ್ತುವನ್ನು ತಿಳಿಯಪಡಿಸಬೇಕಾದರೆ ಅವನಿಗೆ ತಿಳಿದಿರುವ ಪೈಕಿ ಯಾವ ವಸ್ತು ಉದ್ದಿಷ್ಟ ವಸ್ತುವಿಗೆ ಹತ್ತಿರವೋ, ಅಥವಾ ಹೋಲುತ್ತದೆಯೋ, ಅದರ ಗುರುತನ್ನು ಮೊದಲು ಹೇಳಿ ಅದು ಅವನ ತಿಳುವಳಿಕೆಗೆ ಬಂದ ಮೇಲೆ ಆ ಎರಡಕ್ಕೂ ಇರುವ ವ್ಯತ್ಯಾಸಗಳನ್ನು ತೋರಿಸುವುದು.

Basic Idea: ನಮ್ಮ ಹಳೆಯ ತಿಳಿವಳಿಕೆ ಹೊಸ ತಿಳಿವಳಿಕೆಗೆ ಅಡಿಗಲ್ಲು. ಹಿಂದಿನ ಅನುಭವದಿಂದ ಮುಂದಿನ ಅನುಭವಕ್ಕೆ ದಾರಿ.

ಉದಾಹರಣೆ: ಅರುಂಧತೀದರ್ಶನ.
ಹಿಂದೂ ಸಂಪ್ರದಾಯದಲ್ಲಿ ಮದುವೆಯ ದಿನ ಸಂಜೆ ವಧೂವರರಿಗೆ ಅರುಂಧತೀದರ್ಶನ ಮಾಡಿಸುವ ಸಂಪ್ರದಾಯ ಒಂದಿತ್ತು. ಅರುಂಧತಿಯು ಪತಿವ್ರತಾಧರ್ಮಕ್ಕೆ ಆದರ್ಶಳು. ಆದರೆ ಅದು ಬಹು ಸಣ್ಣ ನಕ್ಷತ್ರ. ಬೇಗ ಕಣ್ಣಿಗೆ ಸಿಗುವುದಿಲ್ಲ. ಆದ್ದರಿಂದ ಪುರೋಹಿತರು ಒಂದು ಉಪಾಯ ಮಾಡುತ್ತಾರೆ.
೧. ಮೊದಲು ಉತ್ತರದ ದಿಕ್ಕಿಗೆ ತಿರುಗಿ ಎನ್ನುತ್ತಾರೆ - ಅಧ್ಯಾರೋಪ , ಉತ್ತರ ದಿಕ್ಕು ಅರುಂಧತಿ ಅಲ್ಲಿ - ಅಪವಾದ
೨. ಸಪ್ತರ್ಷಿಗಳನ್ನೂ (Ursa major constellation) ತೋರಿಸುತ್ತಾರೆ - ಅಧ್ಯಾರೋಪ, ಸಪ್ತರ್ಷಿ ಮಂಡಲವು ಅರುಂಧತಿ ಅಲ್ಲಿ - ಅಪವಾದ
೩. ವಸಿಷ್ಠ ನಕ್ಷತ್ರ ವನ್ನು ತೋರಿಸುತ್ತಾರೆ (Zeta or Ursa major) - ಅಧ್ಯಾರೋಪ, ವಸಿಷ್ಟರ ಪತ್ನಿ ಅರುಂಧತಿ - ಅಪವಾದ
೪. ವಸಿಷ್ಟರ ಪಕ್ಕದಲ್ಲಿ ಇರುವ ನಕ್ಷತ್ರವನ್ನು ನೋಡಿ ಎನ್ನುತ್ತಾರೆ. - ಆಗ ಅರುಂಧತಿ ದರ್ಶನ ವಾಗುತ್ತದೆ.



ಈ ಬೋಧನೋಪಾಯವನ್ನು ಹೆಚ್ಚಾಗಿ ವೇದ ವೇದಾಂತಗಳಲ್ಲಿ ಪರಬ್ರಹ್ಮವಸ್ತುವನ್ನು ತಿಳಿಸುವ ಉದ್ದೇಶದಿಂದ ಬಳಸಲಾಗಿದೆ.

ವೇದಾಂತ ಹಾಗು ಗೀತೆಯಲ್ಲಿ, ಪರಬ್ರಹ್ಮ ವಸ್ತುವನ್ನು ತಿಳಿಯಲು ನಮಗೆಲ್ಲ ಪರಿಚಿತವಾಗಿರುವ ಪ್ರತ್ಯಕ್ಷ ಪ್ರಪಂಚದಿಂದ ಪ್ರಾರಂಭವಾಗುತ್ತದೆ ವಿಚಾರ. ಅದರಲ್ಲಿ ಕೆಲವು "ಅಧ್ಯಾರೋಪ" ಉದಾಹರಣೆಗಳು:
೧. ಜಗತ್ತೇ ಬ್ರಹ್ಮ. ಜಗತ್ತು ಬ್ರಹ್ಮ ಕಾರ್ಯ. ಕಾರ್ಯವೆಂಬುದು ಕಾರಣದ ರೂಪಾಂತರ.
೨. ಜಗತ್ತಿನಲ್ಲಿ ಜಡಪದಾರ್ಥಗಳನ್ನು ಸಚೇತನವಾಗಿ ಮಾಡುವುದು ಜೀವ. ಪ್ರತ್ಯಕ್ಷ ದೇಹದ ಒಳಗಡೆ ಗೂಢವಾಗಿ ಸೇರಿಕೊಂಡಿರುವ ಜೀವವು ಬ್ರಹ್ಮ ಚೈತನ್ಯದ ಅಂಶ. ಅದೇ ಬ್ರಹ್ಮ.
೩. ಜಗತ್ತನ್ನು ನಡೆಸಿ ಕಾಪಾಡುತ್ತಿರುವ ಪ್ರಭು ಈಶ್ವರ ಅವನೇ ಬ್ರಹ್ಮ.
೪. ಪ್ರಕೃತಿಯು ಬ್ರಹ್ಮದ ಅಂಗ.

ಹೀಗೆ ಬ್ರಹ್ಮ ವಿಷಯದ ಬಗ್ಗೆ ನಾನಾ ಅಧ್ಯಾರೋಪಗಳು ನಮ್ಮ ತಾತ್ವೀಕ ಸಾಹಿತ್ಯದಲ್ಲಿ ಕಾಣಬಹುದು. ಈ ಮೇಲಿನ ಅಧ್ಯಾರೋಪ ವಾಕ್ಯಗಳು ಅಸತ್ಯಗಳಲ್ಲ, ಭಾಗಶಃ ಸತ್ಯಗಳು. ಹಾಗೆ ಸತ್ಯಭ್ರಾಂತಿಗಳು. ಅವು ಪರಿಷ್ಕಾರವನ್ನು ಅಪೇಕ್ಷಿಸುತ್ತದೆ. ಆ ಪರಿಷ್ಕಾರಗಳು ಅಪವಾದ ವಾಕ್ಯಗಳಿಂದ ಆಗುತ್ತದೆ. ಹೀಗೆ ನಾನಾ ಅಧ್ಯಾರೋಪ - ಅಪವಾದ ಗಳಿಂದ ಬ್ರಹ್ಮವಸ್ತುವನ್ನು ತಿಳಿಯಲು ಸಾಧ್ಯ. ಆ ರಹಸ್ಯ ವಸ್ತುವನ್ನು ತಿಳಿಯಲು ಒಂದು ಉಪಾಯಸಾಧನವಿಲ್ಲದೆ ಹೇಗೆ ಸಾಧ್ಯವಾದೀತು ?

Wednesday, July 1, 2009

ಅಶ್ವತ್ಥ - Banyan Tree in Bhagavad Gita (Adhyaaya 15).

ಧರ್ಮವೆಂಬುದು ಒಂದು ಸಂಬಂಧವಿಧಾನ. ಸಂಬಂಧಗಳು ವಸ್ತುಗಳೆರಡರ ನಡುವೆ ಇರುತ್ತದೆ. ಧರ್ಮವೆಂಬ ಸಂಬಂಧದಲ್ಲಿ ಒಂದು ಕಡೆ ಜೀವ, ಇನ್ನೊಂದು ಕಡೆ ಜಗತ್ತು. ಈ ಸಂಬಂಧವನ್ನು ಅರ್ಜುನನಿಗೆ ತಿಳಿಸಲು ಭಗವಂತನು ಒಂದು ರೂಪಕ (metaphor) ವನ್ನು ಬಳಸುತ್ತಾನೆ. ಈ ಜೀವ, ಜಗತ್ತಿನ ಸಂಬಂಧವನ್ನು "ಸಂಸಾರ" ವೆನ್ನೋಣ. ಜೀವನದಲ್ಲಿ ನಮಗೆ ಯಾವ್ಯಾವುದರ ಸಂಪರ್ಕ ಉಂಟಾಗುತ್ತದೆಯೋ ಅವೆಲ್ಲ ಸಂಸಾರವೇ - "ಕರ್ಮಾನುಬಂಧೀನಿ". ಸಂಸಾರಕ್ಕೂ ಅಶ್ವತ್ಥ ಮರಕ್ಕೂ ಸಮಾನತೆ ಇದೆ ಎಂದು ಭಗವಂತ ತೋರಿಸುತ್ತಾನೆ.

ಒಂದು ಅಶ್ವತ್ಥದ (ಶ್ವ: ಎಂದರೆ ನಾಳೆ, "ಶ್ವಸ್ಥ" ಎಂದರೆ ಇಂದಿರುವಂತೆ ನಾಳೆ ಇರುವುದು, ಅಶ್ವಥ ಎಂದರೆ ಈ ದಿನವಿರುವಂತೆ ನಾಳೆ ಇರಲಾರದ್ದು [ಜಗತ್ತು ಎಂದರೂ ಇದೇ ಅರ್ಥ]) ಮರವಿದೆ, ಅದು ಎಂದೆಂದಿಗೂ ನಾಶವಾಗದ್ದು . ಅದರ ಬೇರು ತಲೆಯ ಕಡೆ ಇವೆ. ಕೊಂಬೆಗಳು ಕಾಲಿನ ಕಡೆ. ಅದರ ಎಲೆಗಳೇ ವೇದಗಳು. ಯಾರು ಅದನ್ನು ಬಲ್ಲನೋ ಅವನು ವೇದವನ್ನು ಬಲ್ಲನು. ಏಕೆಂದರೆ ಆ ವೃಕ್ಷದ ಮೂಲವಿರುವುದು ಶಾಶ್ವತ ಬ್ರಹ್ಮ ಚೈತನ್ಯದಲ್ಲಿ ಎಂದು ಅವನು ಬಲ್ಲನು.

ಆ ಮರದ ಕೊಂಬೆಗಳು ಮೇಲಕ್ಕೂ ಕೆಳಗೂ ಚಾಚಿಕೊಂಡಿವೆ. ಆ ಮರಕ್ಕೆ "ಸತ್ವ, ರಜಸ್ಸು, ತಮಸ್ಸು" ಗಳೆಂಬ ಗುಣಗಳೇ ಗೊಬ್ಬರ. ಭೋಗ್ಯ ವಿಷಯಗಳೇ ಅದರ ಚಿಗುರೆಲೆ. ಅದರ ಬಿಳಲು ಬೇರುಗಳು ಮನುಷ್ಯಲೋಕದಲ್ಲಿ ಪಾಶಗಳಾಗಿ ಹಬ್ಬಿಕೊಂಡಿವೆ.

ಸಂಸಾರಕ್ಕೂ ಅಶ್ವತ್ಥ ಮರಕ್ಕೂ ಇರುವ ಸಮಾನತೆ - ಬಹುಕಾಲಿಕತ್ವ, ಬಹುವಿಸ್ತೃತತ್ವ, ಬಹುಗ್ರಂಥಿಲತ್ವ, ಬಹುಪೋಷಕತ್ವ.
ಅಶ್ವತ್ಥವು ಅದೃಶ್ಯ ಬ್ರಹ್ಮದ ದ್ರಶ್ಯ ಪ್ರತೀಕ. ಈ ಭಾವನೆಯಿಂದಲೇ ಸಮಸ್ತ ಹಿಂದುಗಳೂ ಅದನ್ನು ಪವಿತ್ರವೆಂದು ನಂಬಿ ಪೂಜೆ ಪ್ರದಕ್ಷಿಣೆ ಮಾಡುವುದು. (or as westeners put "Worshipping Trees, stocks and stones")

ಮೇಲಿನ ವಿವರಣೆಯಲ್ಲಿ "ವೇದಗಳು ಆ ವೃಕ್ಷದ ಎಲೆಗಳು" ಎಂದು ಹೇಳಿದ್ದರೆ. ಇದರ ಅರ್ಥ ತಿಳಿದುಕೊಳ್ಳೋಣ. ಎಲೆಗಳು ವೃಕ್ಷವನ್ನು ಕಾಪಾಡುವು ಕೆಲಸವನ್ನು ಮಾಡುತ್ತದೆ. ಅದೇ ರೀತಿ ಸಂಸಾರಕ್ಕೆ ಧರ್ಮವು ಪೋಷಕ. ಆ ಧರ್ಮಕ್ಕೆ ಉಪಲಕ್ಷಣವೇ ವೇದ (ವೇದೋಖಿಲಂ ಧರ್ಮಮೂಲಂ). ಆದದ್ದರಿಂದ ಸಂಸಾರ ವೃಕ್ಷಕ್ಕೆ ಸಂರಕ್ಷಕವಾದದ್ದು ವೇದಶಾಸ್ತ್ರ ಪ್ರೇರಿತ ಧರ್ಮ.

ಕಡೆಯದಾಗಿ, ಗೀತೆಯ ಈ ೧೫'ನೆ ಅಧ್ಯಾಯದಲ್ಲಿ, ಅಶ್ವತ್ಥವನ್ನು ಕಡೆಯಬೇಕು ಎಂಬ ವಿವರಣೆ ಇದೇ. ಏನು ಇದರ ಅರ್ಥ? ಏಕೆ? ಹೇಗೆ?
ಇದಕ್ಕೆ ಒಂದೇ ವಸ್ತುವಿನ (ಆತ್ಮ) ಎರಡು ದಶೆಗಳನ್ನು (ಜೀವಾತ್ಮ, ಪರಮಾತ್ಮ) ತಿಳಿದಿದ್ದರೆ ಅರ್ಥ ಮಾಡಿಕೊಳ್ಳಲು ಸುಲಭ. ಈ ಅಂಕಣವನ್ನು ತಿಳಿಯುವುದಕ್ಕಾಗಿ ಈ ಎರಡನ್ನು - Kinetic Energy and Potential Energy, respectively, ಎಂದು ಅರ್ಥೈಸಿ ಮುಂದುವರಿಸೋಣ. ಮುಂದಿನ ಅಂಕಣದಲ್ಲಿ ಇದರ ಬಗ್ಗೆ ವಿವರವಾಗಿ ಬರೆಯುತ್ತೇನೆ (ಅಥವಾ "copy" ಮಾಡುತ್ತೇನೆ). ಈ ಎರಡರಲ್ಲಿ ಸಂಸಾರ ಸಂಪರ್ಕವಿರುವುದು ಜೀವ ದಶೆಗೆ. ಸಂಸಾರ ವೃಕ್ಷದೊಳಗೆ ಜೀವ ಸೇರಿಕೊಂಡಿದೆ. ಆ ವೃಕ್ಷದ ಮೂಲ ಪರಮೊತ್ತಮ ಸ್ಥಾನದಲ್ಲಿ, ಅದು ಬ್ರಹ್ಮವಸ್ತು ಹಾಗು ಪೂಜ್ಯವಾದದ್ದು. ಜೀವವು ಮೇಲಕ್ಕೆ ಹತ್ತಿ ಆ ಮೇಲ್ಭಾಗವನ್ನು ಸೇರಿಕೊಂಡರೆ ಆಗ ಆ ಮರದ ಹುಳಿಕಹಿಗಳಿಂದ, ಅದರ ಕೊಳೆನಾತಗಳಿಂದ, ಕ್ರಿಮಿ ಕೀಟಗಳಿಂದ, ಜೀವಕ್ಕೆ ಬಿಡುಗಡೆ. ಅದೇ ಮೋಕ್ಷ - ಅದನ್ನು ವಿವರಿಸಲೇ (ಮೇಲ್ಭಾಗವನ್ನು ಸೇರುವ ಕಾರ್ಯ) ಆ ವೃಕ್ಷವನ್ನು ಕಡಿಯಬೇಕು ಎಂದಿರುವುದು.

ಈ ಮರವನ್ನು ಕಡೆಯುವ ಕೊಡಲಿ - "ಅಸಂಗ" , ಅದೇ ಅಭಿಮಾನ ತ್ಯಾಗ, ಅದೇ ಮಮತಾತ್ಯಾಗ. ಆ ಕೊಡಲಿಯಿಂದ ಕೊಂಬೆಯನ್ನು ಕಡಿದು, ಆ ಪೊದೆ ಪಂಜರದಲ್ಲಿ ಕೊಂಡಿ ಮಾಡಿಕೊಂಡು ಅದರ ಮೂಲಕ ಹೊರಕ್ಕೆ ಹೊರಟು ಬ್ರಹ್ಮಾನುಭವ ಪದವಿಗೆ ದಾರಿ ಮಾಡಿಕೊಳ್ಳತಕ್ಕದ್ದು. "ಅಸಂಗ" ವು ಸರ್ವೋತ್ಕೃಷ್ಟ ಧರ್ಮ. ಆ ಧರ್ಮ ಪಾಲನೆಯಿಂದ ಕೊಂಬೆ ರೆಂಬೆಗಳು ನಮಗೆ ಪ್ರತಿಬಂಧಕಗಳಾಗದೆ ಅನುಕೂಲಗಳಾಗುತ್ತವೆ. ಅದರ ಮೂಲಕವೇ ನಾವು ಮೂಲವನ್ನು ಕಾಣಲು ಸಾಧ್ಯ.
"ಅಸಂಗ" ಎಂದರೆ: ಇದು ನನ್ನದಲ್ಲ, ಇದು ನನ್ನ ಭೋಗಕ್ಕೆ ಬೇಡ, ಇದರಿಂದ ನನ್ನ ಶೋಧನ ಚಿಕಿತ್ಸೆಯಾಗಲಿ. ಇದನ್ನು ಪಾಲಿಸುವುದೇ ಬ್ರಹ್ಮಾನ್ವೇಷಣೆಯ ದಾರಿ.


ಸಾರಂಶ:
೧. ಆ ಮರದ ಬೇರು ಮೂಲ ಮೇಲುಗಡೆ ಎಲ್ಲೂ! - ಸರ್ವೋನ್ನತ ಭಾಗದಲ್ಲಿ ಬುಡದ ಬೇರು
೨. ಕೊಂಬೆರೆಂಬೆಗಳು ಕೆಳಗಡೆ ನಮಗೆಟುಕುವಂತೆ - ಅಧೋಭಾಗದಲ್ಲಿ ಕೊಂಬೆದಳು
೩. ತ್ರಿಗುಣಗಳು ಅದಕ್ಕೆ ಗೊಬ್ಬರ.
೪. ಚಿಗುರುಗಳು ವಿಷಯಪ್ರವಾಲಾ : - ಹೊಸಹೊಸ ಭೋಗ ವಿಷಯಗಳು ವಿಧವಿಧವಾದ ಆಶೆಗಳು.
೫. ಬಿಳಲುಗಳು "ಕರ್ಮಾನುಬಂಧೀನಿ" (ನಮ್ಮನ್ನು ನಮ್ಮ ಕರ್ಮಗಳಿಂದಲೇ ಕಟ್ಟಿ ಹಾಕುವುದು) ಕ್ರಮವನ್ನು ಅನುಸರಿಸಿಕೊಂಡು ಹೋಗುತ್ತಿರುತ್ತವೆ.
೬.ಯಾವ ಬ್ರಹ್ಮವಸ್ತುವು ತತ್ವದಲ್ಲಿ - ಸ್ವಸ್ವರೂಪದಲ್ಲಿ ಸ್ಥಿರವೋ, ಏಕಾಕಾರವೋ , ನಿರ್ವಿಕಾರವೋ, ಅದು ಕಾರ್ಯದಶೆಯಲ್ಲಿ ಚಲನಶೀಲ, ಬಹುರೂಪಿ, ಸಂಸಾರವಿಕಾರಿ - ಅದಕ್ಕಾಗಿಯೇ ಅದನ್ನು "ಊರ್ಧ್ವಮೂಲಂ" ಎಂದಿರುವುದು.
೭. ಅಶ್ವತ್ಥವನ್ನು ಕಡಿಯಬೇಕು - ಅಸಂಗಶಸ್ತ್ರೇಣ