Monday, November 12, 2007

Samskruti?

ಇದನ್ನು DVG ಅವರ "ಸಂಸ್ಕೃತಿ" ಎಂಬ ಪುಸ್ತಕದಿಂದ ಆಯಿದು ಬರೆದಿದ್ದೇನೆ

ಶಬ್ಧ ವಿಚಾರ:
ಸಂಸ್ಕೃತಿ ಎಂಬ ಮಾತು ಪೂರ್ವದಲ್ಲಿ (ಹಾಗು ಪುರಾತನ ಗ್ರಂಥಗಳಲ್ಲಿ) ಎಲ್ಲಿಯೂ ಬಳಕೆಯಲಿದ್ದಂತಿಲ್ಲ. ಆದರೆ ಅದಕ್ಕೆ ಸಂಬಂಧ ಪಟ್ಟ ಪದ "ಸಂಸ್ಕಾರ" ಬಳಕೆಯಲ್ಲಿದೆ. ಒಂದು ಹೊಸಾ ಮಾತು ನಮ್ಮಲ್ಲಿ ವಾಡಿಕೆಗೆ ಬರುತ್ತಿದ್ದರೆ ಒಂದು ಹೊಸ ಅಭಿಪ್ರಾಯ ನಮ್ಮ ಜೀವನದೊಳಗೆ ಪ್ರವೇಶಿಸುತ್ತಿದೆ ಎಂದು ಅರ್ಥ. ಆದರೆ ಸಂಸ್ಕೃತಿಯನ್ನು "ನವೀನ" ಭಾವ ಎನ್ನುವುದಕ್ಕಿಂತ "ವಿಸ್ತೃತ" ಭಾವ ಎನ್ನುವುದೇ ಉಚಿತ.

ಸಂಸ್ಕೃತಿ ಎಂದರೆ:
೧. ಬರಿಯ ವಿದ್ಯೆಯಲ್ಲ
೨. ಬರಿಯ ತಿಳುವಲಿಕೆಯಾಗಲಿ ವಸ್ತುವಿಜ್ಞಾನವಲ್ಲ
೩. ಬರಿಯ ಜಾನತನವು ಯುಕ್ತಿಯೂ ಅಲ್ಲ.
೪. ಬರಿಯ ಕಲಾಭಿರುಚಿಯೂ ಅಲ್ಲ

ಸಂಸ್ಕಾರದಿಂದ ಸಂಸ್ಕೃತಿ. ಸಂಸ್ಕಾರ ಅಥವಾ ಸಂಸ್ಕರಣ - ಸಮ್ಯಕ್ ಕರಣ - ಸಮ್ಯಕ್ ಕೃತಿ - ಸಂಸ್ಕೃತಿ, ಹಾಗೆಂದರೆ "ಚೆನ್ನಗುವಂತೆ" ಮಾಡುವುದು. ಅಥವಾ "ಒಳ್ಳೆಯದಾಗಿಸುವುದು". ಒಳ್ಳೆಯದು ಅಂದರೆ - ಒಂದಾನೊಂದು ಪದಾರ್ಥವು ಅಥವಾ ಸಂಗತಿಯು ಹೇಗಿರಬೇಕೋ ಹಾಗಿರುವುದು. ನಡೆ ನುಡಿಗಳ ಚೊಕ್ಕತನವೆ ಸಂಸ್ಕೃತಿ.

ಸಂಸ್ಕೃತಿಯ ಅಂಶಗಳು:

೧. ಜೀವನ ಸಂಧರ್ಭಗಳ ಯುಕ್ತಾಯುಕ್ತ ವಿವೇಚನೆ.
೨. ವಸ್ತುಗಳ ಮೌಲ್ಯ ತಾರತಮ್ಯ ಗಣನೆ.
೩. ಪರೀಂಗಿತ ಪರಿಜ್ಞಾನ
೪. ಸರಸತಾಭಿರುಚಿ
೫. ಧರ್ಮ ಚಿಂತನೆಯ ಜಾಗರೂಕತೆ
೬. ಆತ್ಮ ಶೋಧನೆ ಆತ್ಮ ಸಂಯಮ

ಆದರೆ ---
ಒಳ್ಳೆಯದು ಎಂಬುದಕ್ಕೆ ನಿರ್ದೇಶಸೂತ್ರ ಯಾವುದು? ಗುನಸಮನ್ವಯಕ್ಕೆ ಆದರ್ಶ ಯಾವುದು? ತಾರತಮ್ಯ ಗಣನೆಗೆ ಮೂಲ್ಯ ನಿರ್ಣಯಕ್ರಮ ಯಾವುದು?
"ಒಳ್" (ಉಳ್) ಎಂಬುದಕ್ಕೆ (೧) ಉಂಟಾಗಿರು (೨) ಒಳ್ಳೆಯದಾಗು ಎಂದು ಎರಡರ್ಥ. ಈ ಪದ ಸಂಸ್ಕೃತದ "ಸತ್" ತರಃ. ಯಾವುದು ಅಳಿಯದೆ ಬಾಳಬಲ್ಲದೋ (ಸತ್ಯವೋ) ಅದೇ ನಿಜವಾಗಿ "ಒಳ್ಳೆಯದು" . ಮನುಷ್ಯನಿಗೆ ಗೊತ್ತಿರುವ ವಸ್ತುಗಳಲ್ಲೆಲ್ಲ ಅವನ ಅಂತರಾತ್ಮವೇ ಸರ್ವ ಸತ್ಯ. ಆತ್ಮವೇ ಅವನ ಪಾಲಿಗೆ ಶಾಶ್ವತ, ಅದೇ ಸದ್ವಸ್ತು. ಆ ಅಂತರಾತ್ಮ ಕುರಿತ ಜ್ಞಾನವೇ ವನುಷ್ಯವೆಂಬ ಸೃಷ್ಟಿಯ ವೈಶಿಷ್ಟ್ಯ. ಮನುಷ್ಯನಲ್ಲಿ (ಪ್ರಕೃತಿಯಲ್ಲಿ) ಮೂರು ಗುಣಗಳು ಬೆರೆತುಕೊಂಡಿರುತ್ತದೆ (ಸತ್ವ, ರಜಸ್ಸು, ತಮಸ್ಸು). ಸತ್ವ ಗುಣ ಪ್ರಬಲವಾದಾಗ ಮನುಷ್ಯನ ಬುದ್ದಿ ಅಂತರಾತ್ಮದ ಕಡೆಗೆ ತಿರುಗುತ್ತದೆ (ಹೀಗೆ ಆತ್ಮದ ಕಡೆಗೆ ತಿರಿಗಿಸುವುದಕ್ಕೆ ನಡೆದುಕೊಂಡರೆ ಅದು ಧರ್ಮ). ಆದ್ದರಿಂದ:
" ಆತ್ಮವೇ - ಆತ್ಮೈಕ ದೃಷ್ಟಿಯೇ - ಆತ್ಮಸಾಕ್ಷಾತ್ಕಾರ ಸೌಲಭ್ಯ - ಜಗತ್ತಿನ ಈಲ್ಲಾ ವಿಷಯಗಳಲ್ಲಿಯೂ ನಮಗೆ ಮೌಲ್ಯ ತಾರತಮ್ಯವನ್ನು ನಿರ್ಧರಿಸುವ ಮಾಪಕವಾಗಿರಬೇಕಾದದ್ದು." - ಅದೇ ಸಂಸ್ಕೃತಿ ಬೀಜ.

ಸುಸಂಸ್ಕ್ರುತನು ಎಂಥವನು?

ಅವನ ಲಕ್ಷಣಗಳು ಮುಖ್ಯವಾಗಿ ಐದು:
೧. ಸ್ವಸ್ಥಾನ ಪರಿಜ್ಞಾನ - ತನ್ನ "ಜಾಗ" ಯಾವುದು ಎಂಬುದನ್ನು ಸರ್ವದಾ ಹುಡುಕಿ ಕಂಡುಕೊಳ್ಳುತ್ತಿರಬೇಕು. " A thing out of its place is dirt"
೨. ಪರೀಂಗಿತ ಪರಿಗ್ರಹಣ - ನಾವು ಮಾಡುವ ಕೆಲಸಗಳು (ಆಡುವ ಮಾತು) ಇತರರ ಮೇಲೆ ಹೇಗೆ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದನ್ನೂ ಎಡೆಬಿಡದೆ ಚಿಂತಿಸುತ್ತಿರಬೇಕು.
೩. ಸ್ವಾರ್ಥ ನಿಯಮನ - ಸ್ವಾರ್ಥದ ಮಿತಿ (ಹದ್ದಿನಲ್ಲಿಡುವುದು).
೪. ಸಮನ್ವಯ ದೃಷ್ಟಿ - ನಾನಾ ಭೇಧಗಳನ್ನು, ಅಭಿಪ್ರಾಯಗಳನ್ನು, ಪರೀಕ್ಷಿಸಿ ಅವುಗಳ ಸತ್ಯಾಂಶಗಳನ್ನು ಶೇಖರಮಾಡುವುದು.
೫. ಸರಸತೆ - ಎಲ್ಲಾ ಸಂದರ್ಭಗಳಲ್ಲಿಯೂ ಸ್ವಾರಸ್ಯಕಣವನ್ನು ಹುಡುಕಿ ತೆಗೆಯುವ ಪ್ರವೃತ್ತಿ.

ಸುಸಂಸ್ಕ್ರುತನ ಕೈ ಬಾಯಿಗಳೂ ಅವಕ್ಕೆ ಹಿಂದಿರುವ ಮನಸ್ಸು ಬುದ್ದಿಗಳೂ ಸರ್ವದಾ ಅವನ ಹಿಡಿತದಲ್ಲಿರುತ್ತದೆ. ಆ ಇಂದ್ರಿಯನಿಯಂತ್ರಣವೇ ಆತ್ಮಸಂಯಮ. - ತನ್ನನ್ನು ತಾನೆ ಹದ್ದಿನಲ್ಲಿರಿಸಿಕೊಂದಿರುವುದು.

ಸಂಸ್ಕೃತಿ ಮತ್ತು ಪ್ರಕೃತಿ:

ಪ್ರಕೃತಿ ಎಂದರೆ ಸ್ವಭಾವ - ತಾನಾಗಿ ಉಂಟಾದದ್ದು. ಮನುಷ್ಯನ್ನು ಪ್ರಕೃತಿಯಿಂದ ಮೇಲ್ಮಟ್ಟಕ್ಕೆದ್ದಾಗ ಸಂಸ್ಕೃತಿ. ಪ್ರಕೃತಿಯೊಡನೆ ಪೌರುಷ ವಿವೇಕ ಬೆರೆತಾಗ ಸಂಸ್ಕೃತಿ. ಉದಾಹರಣೆಗೆ ಮಾತನಾಡಬೇಕೆನಿಸುವುದು ಪ್ರಕೃತಿ, ಅದರಲ್ಲಿ ಮಿತಿ ಮರ್ಯಾದೆಗಳು ಸಂಸ್ಕೃತಿ (ಬಹಿರಂಗದ ಸಂಸ್ಕೃತಿ). ಆಸೆ, ಮೋಹ, ರೋಷ, ಅಸೂಯೆ ಪ್ರಕೃತಿ. ನ್ಯಾಯ, ವಿವೇಕ, ಕ್ಷಮೆ, ಸಹನೆ ಸಂಸ್ಕೃತಿ (ಅಂತರಂಗದ ಸಂಸ್ಕೃತಿ).

ಸಾಧನೆ:

ಸಂಸ್ಕೃತಿಯ ಈ ನಾನ ಗುಣಗಳು ಬೆಳೆದು ದೃಢಪಡಿಸಲು ಬಹುಕಾಲದ ಪ್ರಯತ್ನವೂ ಅಭ್ಯಾಸವೂ ಬೇಕು. ಇದು ನಿಯಮ ಪಾಲನೆಯಿಂದಲೇ (ಧೀರ್ಘ, ಸಂತತ) ಸಾಧ್ಯ. ಆ ನಿಯಮಪಾಲನೆಗೆ ಮನಸ್ಸು ಹಾಗು ಬುದ್ದಿ ಎರಡು ಸಹಕರಿಸಬೇಕು. ಮನಸ್ಸು ಬುದ್ದಿಗಿಂತ ಹೆಚ್ಚು ಪರಿಣಾಮಕಾರಿ. ಆದ್ದರಿಂದ ಸಂಸ್ಕೃತಿ ಪ್ರಿಯನು ಮೊದಲು ಹದಗೊಳಿಸಬೇಕಾದ ಉಪಕರಣ ಮನಸ್ಸು. ಮನಸ್ಸನ್ನು ಹದ ಪಡಿಸುವ ಸಾಧನೆಗಳು - ಸತ್ಕಲೆ ಸತ್ಸಹವಾಸಗಳು. ಸತ್ - ಕಲೆ, ಕಾವ್ಯ, ಸಂಗ, ಕೃತಿ, - ಇಂದ ಜೀವ ಪರಿಪಾಕವಾಗುತ್ತದೆ. ನಮ್ಮ ಅಂತಃಕರಣ ದೃಷ್ಟಿ ಸೂಕ್ಷ್ಮವಾಗುತ್ತದೆ.

ಮನುವಾಕ್ಯ:

ಯಾವ ಸತ್ಯಾಕಾಂಕ್ಷೆಯು ಎಲ್ಲಾ ಕಡೆಯಿಂದಲ್ಲೂ ಜ್ಞಾನವನ್ನು ಅರಿಸುತ್ತಿದೆಯೋ. ಯಾವ ಕೆಲಸವನ್ನು ಮಾಡೋಣವಾದರಿಂದ, ಯಾವ ನಡವಳಿಕೆಯನ್ನು ನಡೆಯೋಣವಾದರಿಂದ, ಎಂದಿಗೂ ನಾಚಿಕೆ ಪದಬೇಕಾಗಲಾರದೋ ಮತ್ತು ಯಾವುದರಿಂದ ಅಂತರಾತ್ಮಕ್ಕೆ ಸಮಾಧಾನವಗುತ್ತದೆಯೋ ಅದು ಸಾತ್ವಿಕತೆಯ ಗುರುತು. - ಸಂಸ್ಕೃತಿ ಎಂದರೆ ಇದೇ ಅಲ್ಲವೇ?

No comments: