Thursday, November 22, 2007

Eeshopanishattu

ವೇದದ ವಿಷಯವು ತ್ರಿಕೂಟ ಸ್ವರೂಪ - ಜೀವ, ಜಗತ್ತು, ಈ ಎರಡಕ್ಕೂ ಅನುಭವ ಸಂಬಂಧವನ್ನು ಕಲ್ಪಿಸುವ ತತ್ವ. ವೇದವು ವಿಷಯ ವೆಶೇಷದ ದೃಷ್ಟಿಯಿಂದ ಸ್ಥೂಲವಾಗಿ (Big Picture of Classification) ಮೂರು ಭಾಗಗಳುಳ್ಳದ್ದಾಗಿದೆ.

೧. ಸಂಹಿತೆ - ಬಾಹ್ಯಜಗತ್ತಿನಲ್ಲಿ ಕಾಣಬಂದ ಪ್ರಕೃತಿಯ ಅಧ್ಭುತಗಳನ್ನು ನೋಡಿ ಬೆರಗಾಗಿ, ಆ ಅಧ್ಭುತಶಕ್ತಿಗಳನ್ನು ದೇವತೆಗಳೆಂದು ಭಾವಿಸಿ ಕೊಂಡಾಡಿರುವ ಭಾಗ.
೨. ಬ್ರಾಹ್ಮಣ - ನಾನಾ ದೇವತೆಗಳನ್ನು ಒಲಿಸಿಕೊಳ್ಳಲು ಮಾಡಬೇಕಾದ ಪೂಜೆ ಪುನಸ್ಕಾರಗಳ ವಿಧಾನಗಳನ್ನು ಕುರಿತ ಭಾಗ.
೩. ಉಪನಿಷತ್ತು - ಆ ನಾನಾ ದೇವತೆಗಳಿಗೆ ಶಕ್ತಿಪ್ರದವೂ ಆಗಿ, ಒಂದು ಮಹಾ ದೈವವಿರುತ್ತದೆಯೆಂದು ಸಿದ್ಧಾಂತಿಸಿ, ಆ ಮಹಾ ಸತ್ವವೆ ಜಗದೇಕಮೂಲವೆಂದು, ಶಾಶ್ವತವೆಂದು, ಉದ್ದೇಶಿಸಿ, ಆ ಪರತತ್ವಕ್ಕೂ ಮನುಷ್ಯನ ಜೀವಕ್ಕೂ ಇರುವ ಸಂಬಂಧವನ್ನು ತಿಳಿಸಿಕೊಡುವ ಭಾಗ. ಇದೇ ವೇದಾಂತ - ವೇದದ ಕಡೆಯ ಮಾತು.

ವೇದವನ್ನು ವಿಷಯದ ದೃಷ್ಟಿಯಿಂದ - ಕರ್ಮಕಾಂಡ (ಸಂಹಿತೆ, ಬ್ರಾಹ್ಮಣ), ಜ್ಞಾನಕಾಂಡ (ಉಪನಿಷತ್ತು) - ಎಂದು ವಿಭಾಗಿಸುವುದೂ ಉಂಟು. ಬ್ರಾಹ್ಮಣ ವೇದಭಾಗಕ್ಕೂ ಉಪನಿಷತ್ತಿಗೂ ನಡುವೆ ಸೇತುವೆಯಂತೆ ಅರಣ್ಯಕವೆಂಬ ವೇದಭಾಗವಿರುತ್ತದೆ. ವಾಸ್ತವವಾಗಿ ವೇದದ ಒಂದು ಭಾಗಕ್ಕೂ ಇನ್ನೊಂದು ಭಾಗಕ್ಕೂ ನಡುವೆ ಗೋಡೆ ಕಂದಕಗಳೇನೂ ಇಲ್ಲ. ಅಂದರೆ ಉಪನಿಷತ್ತುಗಳ ತಾತ್ಪರ್ಯ ಸಂಹಿತೆ ಬ್ರಾಹ್ಮಣ ಭಾಗಗಳಲ್ಲೂ ಬರುತ್ತದೆ.

ಉಪನಿಷತ್ತು:
ಉಪನಿಷತ್ತು ಎಂಬ ಮಾತಿಗೆ ಎರದರ್ಥ - ೧. ಸಮೀಪಕ್ಕೆ ಕರೆದುಕೊಂಡು ಹೋಗಿ ತಲುಪಿಸುವುದು ೨. ಸಮೀಪದಲ್ಲಿ ನಿಷ್ಠೆಯಿಂದ ಕುಳಿತಿರುವಂತೆ ಮಾಡುವುದು.

ಇದು ಶಾಸ್ತ್ರಪ್ರಬಂಧವಲ್ಲ, ಇದು ಅವುಗಳಿಗೆ ಮೂಲ ಸಾಮಗ್ರಿ. ಇದರಲ್ಲಿ, ಶಾಸ್ತ್ರ ಗ್ರಂಥಗಳಲ್ಲಿ ಕಾಣಬರುವ ಕ್ರಮ ವ್ಯವಸ್ಥೆ, ಪ್ರಕರಣ ವಿಭಾಗ, ತರ್ಕಸರಣಿ, ಕಾಣಬಾರದು. ಇದು ಒಂದು ಕಡೆ ಕಾವ್ಯ, ಒಂದು ಕಡೆ ಶಾಸ್ತ್ರ. ಉಪನಿಷತ್ತುಗಳು ೧೦೮ ಪ್ರಸಿದ್ದವಾದವು. ಅವುಗಳಲ್ಲಿ ಹತ್ತು ಪರಮ ಪ್ರಮಾಣಗಳೆಂದು ಗಣ್ಯವಾಗಿ, ತ್ರಿಮತಾಚಾರ್ಯರುಗಳ (ದ್ವೈತ, ಅದ್ವೈತ, ವಿಶಿಷ್ಟಅದ್ವೈತ) ಭಾಷ್ಯಕ್ಕೆ ವಿಷಯಗಳಾಗಿವೆ - ಈಶ, ಕೇನ, ಕಠ , ಪ್ರಶ್ನ, ಮುಂಡ, ಮಾಂಡೂಕ್ಯ, ತಿತ್ತಿರಿ: , ಐತರೇಯಂ, ಛಾಂದೋಗ್ಯಂ, ಬೃಹದಾರಣ್ಯಕಂ.


ಈಶೋಪನಿಷತ್ತಿನ ಉಪದೇಶ:

ಪ್ರವೃತ್ತಿ ಹಾಗು ನಿವೃತ್ತಿ ಎರಡರ ಸಮನ್ವಯವನ್ನು ಭೋಧಿಸಿರುವುದೇ ಈಶೋಪನಿಷತ್ತಿನ ವಿಶೇಷ ಗುಣ. ಪುರುಷಾರ್ಥದ ಸಾಧನೆಗೆ, ಬ್ರಹ್ಮದರ್ಶನಕ್ಕೆ - ಕರ್ಮಮಾರ್ಗ ತಕ್ಕದೆ ಅಥವಾ ಜ್ಞಾನಮಾರ್ಗ ತಕ್ಕದೆ? - ಜ್ಞಾನಮಾರ್ಗ ಎಂದರೆ - ನಿವೃತ್ತಿ, ಸನ್ಯಾಸ, ವೈರಾಗ್ಯ. ಕರ್ಮಮಾರ್ಗ ಎಂದರೆ - ಸಂಸಾರ, ಪ್ರವೃತ್ತಿ, ಸಮಗ್ರ ಧರ್ಮ ಶಾಸ್ತ್ರ ವಿಹಿತ ಕರ್ಮ. ಮೋಕ್ಷಕ್ಕೆ ಜ್ಞಾನ ಬೇಕು, ಜ್ಞಾನಕ್ಕೆ ಕರ್ಮ ಬೇಕು. ಕರ್ಮವು ಜ್ಞಾನಕ್ಕೆ ದಾರಿಮಾಡಬೇಕಾದರೆ ಅದು ಸ್ವಾರ್ಥ ಸ್ಪರ್ಶವಿಲ್ಲದ ಕರ್ಮವಾಗಿರಬೇಕು. ಅಂದರೆ - ಬದುಕಬೇಕು, ಭೋಗವೇ ದೊಡ್ಡದೆಂದುಕೊಳ್ಳದೆ ಬದುಕಬೇಕು. ಲೋಕ ಕಾರ್ಯಗಳನ್ನು ಮಾಡಬೇಕು, ಸ್ವಾರ್ಥದ ಸೊಂಕಿಲ್ಲದೆ ಮಾಡಬೇಕು. ಸಂತೋಷ ಪಡಬೇಕು, ಅಹಂಕಾರ ಮಮಕಾರಗಳನ್ನು ತೊರೆದು ಸಂತೋಷಪಡಬೇಕು. ಪ್ರವೃತ್ತಿ ಇಲ್ಲದೆ, ಲೌಕಿಕ ಜೀವನವಿಲ್ಲದೆ, ಅಂತರಂಗ ಶೋಧನೆ ಇಲ್ಲ. ಅಂತರಂಗ ಶೋಧನೆ ಇಲ್ಲದ ನಿವೃತ್ತಿಗೆ ಸಾರ್ಥಕ್ಯ ಇಲ್ಲ. ಅಂಥ ಪರಿಶುದ್ದ ನಿವೃತ್ತಿ ಇಲ್ಲದೆ ತತ್ವ ಸಾಕ್ಷಾತ್ಕಾರ ಇಲ್ಲ. ತತ್ವ ಸಾಕ್ಷಾತ್ಕಾರ ಇಲ್ಲದೆ, ಮನುಷ್ಯನಿಗೆ ಲೋಕ ಜೀವನದ ದ್ವಂದ್ವ ಜಾಲಿಕೆಯಿಂದ ಬಿಡುಗಡೆ ಇಲ್ಲ. ಲೋಕಾಸಕ್ತಿ, ಸ್ವಾರ್ಥವಿರಕ್ತಿಗಳನ್ನು ಜೋಡಿಸಿ ಬಾಳಬಲ್ಲವನೆ ಯೋಗಿ.

No comments: