Thursday, November 15, 2007

Ruta Satya Dharma

ಈ ಭಾಗವನ್ನು DVG ಅವರ "ಋತ, ಸತ್ಯ ಮತ್ತು ಧರ್ಮ" ಎಂಬ ಪುಸ್ತಕದಿಂದ ಬರೆದಿದ್ದೇನೆ.

ಋತ:
ಋತ ಶಬ್ಧದ ಅರ್ಥಗಳು:
೧. ಮೊದಲು ಮನಸ್ಸು ತಾನೇ ಸ್ವತಂತ್ರವಾಗಿ ಮಾಡುವ ಕಾರ್ಯ. ನೈಜ ಪ್ರವೃತ್ತಿ, ಸ್ವತಂತ್ರವಾದ ನಡವಳಿಕೆ. ಋ - ಎಂಬುದು "ಗತಿ" (ಚಲನೆ) ಎಂಬರ್ಥದಲ್ಲಿ.
೨. ಚರಾಚರ ಜಗತ್ತಿನ ಸ್ಥಿತಿ ಚಲನೆಗಳಲ್ಲಿ ಕಾಣಬರುವ ಕಟ್ಟುಪಾಡನ್ನು ವೇದದಲ್ಲಿ ಋತ ಎಂದು ಬಳಕೆಯಲ್ಲಿದೆ. ಇದನ್ನು ಇತರರು ಬದಲಾಯಿಸುವಂತಿಲ್ಲ. - ಸರ್ವಕಾಲಗಳಲ್ಲೂ ಇರತಕ್ಕದ್ದು (ಸತ್ಯ).
೩. ಕರ್ಮ-ಫಲ ಸಂಬಂಧ ಮತ್ತು ಋಣ-ಋಣಿ ಸಂಬಂಧ.
೪. ಯಜ್ಞ, ಯಾಗ ಪೂಜಾ ವಿಧಾನಗಳು ಮತ್ತು ಅದರಲ್ಲಿ ಬಳಸುವ ನೀರು, ಬೆಂಕಿ, ಮೂದಲಾದ ಪವಿತ್ರ ದ್ರವ್ಯಗಳು.

ಆದರೆ ಋತ ಎಂಬ ಶಬ್ಧಕ್ಕೆ ಬಹಳ ಹಿಂದಿನ ಅರ್ಥ - "ಸ್ವಾಭಾವಿಕ ಸಂಗತಿ" ಅಥವಾ "ಸತ್ಯ ಬೀಜ". ಮನಸ್ಸಿನೋಳಗಡೆ ಕೃತಿಮವಿಲ್ಲದೆ ಇರುವಾಗ, ಮತ್ತು ಹೊರಗಡೆಯಿಂದ ಅದರ ಮೇಲೆ ಯಾವ ಪ್ರಭಾವವೂ ಮೀಳದಿರುವಾಗ ಒಂದಾನೊಂದು ವಿಷಯವನ್ನು ಕುರಿತು ಆ ಮನಸ್ಸಿನಲ್ಲಿ ಯಾವ ಭಾವನೆ ಹುಟ್ಟುತ್ತದೆಯೋ ಅದು "ಋತ".

ಸತ್ಯ ಮತ್ತು ಧರ್ಮ:
ಸತ್ಯವೆಂದರೆ "ಇರುವ" (ಕಾಲಭೇದ, ದೇಶಭೇಧಗಳಿಂದ ರೂಪಗೆಡದೆ) ಸಾಮರ್ಥ್ಯ ಉಳ್ಳದ್ದು. ಧರ್ಮವೆಂದರೆ ಒಂದಾನೊಂದು ವಸ್ತುವನ್ನು ಆ ವಸ್ತುವನ್ನಾಗಿ ಧರಿಸಿರುವ - ಎಂದರೆ ಉಳಿದಿರುವ ಗುಣ ಅಥವಾ ಲಕ್ಷಣ (ಧಾರಣೆ) ಅದೇ ಅದರ ತತ್ವ - ಅದರ ಅದಾಗಿರುವಿಕೆ.

ಋತ + ಸತ್ಯ + ಧರ್ಮ
ಋತವೆಂಬುದು ಸತ್ಯವೆಂಬ ವೃಕ್ಷದ ಆದಿಮೂಲ. ಋತವೇ ಲೋಕಸಂಪರ್ಕದಿಂದ ಸತ್ಯವಾಗುತ್ತದೆ. ಸತ್ಯವೆಂಬುದು ಋತದ ಸಮೃದ್ದ ದಶೆ (Development). ಋತದ ವಾಗ್ರೂಪ ಸತ್ಯ (ಸತ್ಯದ ಕಾರ್ಯರೂಪ ಧರ್ಮ). ಆದ್ದರಿಂದ ಧರ್ಮದ ಅಡಿಪಾಯ ಋತ. ಋತ ಎಂಬುದರ ಮೂಲಾರ್ಥದಲ್ಲಿ ಸತ್ಯವೆಂಬುದು ಮಾತ್ರವಲ್ಲದೆ ಕರ್ಮಫಲವಿಶಯವಾದ ಋಣಬಂಧನವಿಧಿ ಎಂಬುದೂ ಸೇರಿರುತ್ತದೆ. - ನೈಜ ಚರ್ಯೆ ಮತ್ತು ತಜ್ಜನಿತ ಫಲ (ಸಹಜ ವಸ್ತು ಮತ್ತು ತದ್ವಸ್ತು ಕಾರ್ಯ). ಈ ಸರಪಣಿಯೇ ಋತ. ಇದರಿಂದ ತಪ್ಪಿಸಿಕೊಳ್ಳುವುದು ಸಾದ್ಯವಲ್ಲದ ಕಾರಣ ಅದು ಒಂದು ನಿಯಮ. ಆದ್ದರಿಂದ, ಅದು ಒಂದು ಧರ್ಮ.

ಹೀಗೆ - ಋತ (ಅಂತರಂಗದ ಯಥಾರ್ಥ) ಮತ್ತು ಸತ್ಯ (ಬಹಿಸ್ಸಾಧಿತ ಯಥಾರ್ಥ - ಹೊರ ಪ್ರಪಂಚದಿಂದ ನಾವು ಸಾಧಿಸಿಕೊಂಡ ತಿಳಿವಳಿಕೆ) ಎರಡೂ ನಮ್ಮ ಸರಿಯಾದ ನಡವಳಿಕೆಗೆ (ಧರ್ಮ) ಅವಶ್ಯವಾದವು.

No comments: