Tuesday, July 28, 2009

ಅಧ್ಯಾರೋಪ - ಅಪವಾದ: A teaching technique.

"ಅಧ್ಯಾರೋಪ" ವೆಂದರೆ ವಸ್ತುವಿನ ಮೇಲೆ ಅದರಲ್ಲಿ ನಿಜವಾಗಿಲ್ಲದ ಗುಣವನ್ನು ಆರೋಪಣೆ (Impose) ಮಾಡುವುದು. ಇಲ್ಲಿ "ಅಪವಾದ" ಎಂದರೆ ಹೇಳಿದ್ದನ್ನು ಅಳಿಸಿಹಾಕುವುದು. ಇದು ಒಂದು ಬೋಧನೋಪಾಯ. ಇದರ ವಿಧಾನ: ಒಂದು ವಸ್ತುವನ್ನು ಕುರಿತು ಏನೂ ತಿಳಿಯದವನಿಗೆ , ಆ ವಸ್ತುವನ್ನು ತಿಳಿಯಪಡಿಸಬೇಕಾದರೆ ಅವನಿಗೆ ತಿಳಿದಿರುವ ಪೈಕಿ ಯಾವ ವಸ್ತು ಉದ್ದಿಷ್ಟ ವಸ್ತುವಿಗೆ ಹತ್ತಿರವೋ, ಅಥವಾ ಹೋಲುತ್ತದೆಯೋ, ಅದರ ಗುರುತನ್ನು ಮೊದಲು ಹೇಳಿ ಅದು ಅವನ ತಿಳುವಳಿಕೆಗೆ ಬಂದ ಮೇಲೆ ಆ ಎರಡಕ್ಕೂ ಇರುವ ವ್ಯತ್ಯಾಸಗಳನ್ನು ತೋರಿಸುವುದು.

Basic Idea: ನಮ್ಮ ಹಳೆಯ ತಿಳಿವಳಿಕೆ ಹೊಸ ತಿಳಿವಳಿಕೆಗೆ ಅಡಿಗಲ್ಲು. ಹಿಂದಿನ ಅನುಭವದಿಂದ ಮುಂದಿನ ಅನುಭವಕ್ಕೆ ದಾರಿ.

ಉದಾಹರಣೆ: ಅರುಂಧತೀದರ್ಶನ.
ಹಿಂದೂ ಸಂಪ್ರದಾಯದಲ್ಲಿ ಮದುವೆಯ ದಿನ ಸಂಜೆ ವಧೂವರರಿಗೆ ಅರುಂಧತೀದರ್ಶನ ಮಾಡಿಸುವ ಸಂಪ್ರದಾಯ ಒಂದಿತ್ತು. ಅರುಂಧತಿಯು ಪತಿವ್ರತಾಧರ್ಮಕ್ಕೆ ಆದರ್ಶಳು. ಆದರೆ ಅದು ಬಹು ಸಣ್ಣ ನಕ್ಷತ್ರ. ಬೇಗ ಕಣ್ಣಿಗೆ ಸಿಗುವುದಿಲ್ಲ. ಆದ್ದರಿಂದ ಪುರೋಹಿತರು ಒಂದು ಉಪಾಯ ಮಾಡುತ್ತಾರೆ.
೧. ಮೊದಲು ಉತ್ತರದ ದಿಕ್ಕಿಗೆ ತಿರುಗಿ ಎನ್ನುತ್ತಾರೆ - ಅಧ್ಯಾರೋಪ , ಉತ್ತರ ದಿಕ್ಕು ಅರುಂಧತಿ ಅಲ್ಲಿ - ಅಪವಾದ
೨. ಸಪ್ತರ್ಷಿಗಳನ್ನೂ (Ursa major constellation) ತೋರಿಸುತ್ತಾರೆ - ಅಧ್ಯಾರೋಪ, ಸಪ್ತರ್ಷಿ ಮಂಡಲವು ಅರುಂಧತಿ ಅಲ್ಲಿ - ಅಪವಾದ
೩. ವಸಿಷ್ಠ ನಕ್ಷತ್ರ ವನ್ನು ತೋರಿಸುತ್ತಾರೆ (Zeta or Ursa major) - ಅಧ್ಯಾರೋಪ, ವಸಿಷ್ಟರ ಪತ್ನಿ ಅರುಂಧತಿ - ಅಪವಾದ
೪. ವಸಿಷ್ಟರ ಪಕ್ಕದಲ್ಲಿ ಇರುವ ನಕ್ಷತ್ರವನ್ನು ನೋಡಿ ಎನ್ನುತ್ತಾರೆ. - ಆಗ ಅರುಂಧತಿ ದರ್ಶನ ವಾಗುತ್ತದೆ.



ಈ ಬೋಧನೋಪಾಯವನ್ನು ಹೆಚ್ಚಾಗಿ ವೇದ ವೇದಾಂತಗಳಲ್ಲಿ ಪರಬ್ರಹ್ಮವಸ್ತುವನ್ನು ತಿಳಿಸುವ ಉದ್ದೇಶದಿಂದ ಬಳಸಲಾಗಿದೆ.

ವೇದಾಂತ ಹಾಗು ಗೀತೆಯಲ್ಲಿ, ಪರಬ್ರಹ್ಮ ವಸ್ತುವನ್ನು ತಿಳಿಯಲು ನಮಗೆಲ್ಲ ಪರಿಚಿತವಾಗಿರುವ ಪ್ರತ್ಯಕ್ಷ ಪ್ರಪಂಚದಿಂದ ಪ್ರಾರಂಭವಾಗುತ್ತದೆ ವಿಚಾರ. ಅದರಲ್ಲಿ ಕೆಲವು "ಅಧ್ಯಾರೋಪ" ಉದಾಹರಣೆಗಳು:
೧. ಜಗತ್ತೇ ಬ್ರಹ್ಮ. ಜಗತ್ತು ಬ್ರಹ್ಮ ಕಾರ್ಯ. ಕಾರ್ಯವೆಂಬುದು ಕಾರಣದ ರೂಪಾಂತರ.
೨. ಜಗತ್ತಿನಲ್ಲಿ ಜಡಪದಾರ್ಥಗಳನ್ನು ಸಚೇತನವಾಗಿ ಮಾಡುವುದು ಜೀವ. ಪ್ರತ್ಯಕ್ಷ ದೇಹದ ಒಳಗಡೆ ಗೂಢವಾಗಿ ಸೇರಿಕೊಂಡಿರುವ ಜೀವವು ಬ್ರಹ್ಮ ಚೈತನ್ಯದ ಅಂಶ. ಅದೇ ಬ್ರಹ್ಮ.
೩. ಜಗತ್ತನ್ನು ನಡೆಸಿ ಕಾಪಾಡುತ್ತಿರುವ ಪ್ರಭು ಈಶ್ವರ ಅವನೇ ಬ್ರಹ್ಮ.
೪. ಪ್ರಕೃತಿಯು ಬ್ರಹ್ಮದ ಅಂಗ.

ಹೀಗೆ ಬ್ರಹ್ಮ ವಿಷಯದ ಬಗ್ಗೆ ನಾನಾ ಅಧ್ಯಾರೋಪಗಳು ನಮ್ಮ ತಾತ್ವೀಕ ಸಾಹಿತ್ಯದಲ್ಲಿ ಕಾಣಬಹುದು. ಈ ಮೇಲಿನ ಅಧ್ಯಾರೋಪ ವಾಕ್ಯಗಳು ಅಸತ್ಯಗಳಲ್ಲ, ಭಾಗಶಃ ಸತ್ಯಗಳು. ಹಾಗೆ ಸತ್ಯಭ್ರಾಂತಿಗಳು. ಅವು ಪರಿಷ್ಕಾರವನ್ನು ಅಪೇಕ್ಷಿಸುತ್ತದೆ. ಆ ಪರಿಷ್ಕಾರಗಳು ಅಪವಾದ ವಾಕ್ಯಗಳಿಂದ ಆಗುತ್ತದೆ. ಹೀಗೆ ನಾನಾ ಅಧ್ಯಾರೋಪ - ಅಪವಾದ ಗಳಿಂದ ಬ್ರಹ್ಮವಸ್ತುವನ್ನು ತಿಳಿಯಲು ಸಾಧ್ಯ. ಆ ರಹಸ್ಯ ವಸ್ತುವನ್ನು ತಿಳಿಯಲು ಒಂದು ಉಪಾಯಸಾಧನವಿಲ್ಲದೆ ಹೇಗೆ ಸಾಧ್ಯವಾದೀತು ?

No comments: