ಧರ್ಮವೆಂಬುದು ಒಂದು ಸಂಬಂಧವಿಧಾನ. ಸಂಬಂಧಗಳು ವಸ್ತುಗಳೆರಡರ ನಡುವೆ ಇರುತ್ತದೆ. ಧರ್ಮವೆಂಬ ಸಂಬಂಧದಲ್ಲಿ ಒಂದು ಕಡೆ ಜೀವ, ಇನ್ನೊಂದು ಕಡೆ ಜಗತ್ತು. ಈ ಸಂಬಂಧವನ್ನು ಅರ್ಜುನನಿಗೆ ತಿಳಿಸಲು ಭಗವಂತನು ಒಂದು ರೂಪಕ (metaphor) ವನ್ನು ಬಳಸುತ್ತಾನೆ. ಈ ಜೀವ, ಜಗತ್ತಿನ ಸಂಬಂಧವನ್ನು "ಸಂಸಾರ" ವೆನ್ನೋಣ. ಜೀವನದಲ್ಲಿ ನಮಗೆ ಯಾವ್ಯಾವುದರ ಸಂಪರ್ಕ ಉಂಟಾಗುತ್ತದೆಯೋ ಅವೆಲ್ಲ ಸಂಸಾರವೇ - "ಕರ್ಮಾನುಬಂಧೀನಿ". ಸಂಸಾರಕ್ಕೂ ಅಶ್ವತ್ಥ ಮರಕ್ಕೂ ಸಮಾನತೆ ಇದೆ ಎಂದು ಭಗವಂತ ತೋರಿಸುತ್ತಾನೆ.
ಒಂದು ಅಶ್ವತ್ಥದ (ಶ್ವ: ಎಂದರೆ ನಾಳೆ, "ಶ್ವಸ್ಥ" ಎಂದರೆ ಇಂದಿರುವಂತೆ ನಾಳೆ ಇರುವುದು, ಅಶ್ವಥ ಎಂದರೆ ಈ ದಿನವಿರುವಂತೆ ನಾಳೆ ಇರಲಾರದ್ದು [ಜಗತ್ತು ಎಂದರೂ ಇದೇ ಅರ್ಥ]) ಮರವಿದೆ, ಅದು ಎಂದೆಂದಿಗೂ ನಾಶವಾಗದ್ದು . ಅದರ ಬೇರು ತಲೆಯ ಕಡೆ ಇವೆ. ಕೊಂಬೆಗಳು ಕಾಲಿನ ಕಡೆ. ಅದರ ಎಲೆಗಳೇ ವೇದಗಳು. ಯಾರು ಅದನ್ನು ಬಲ್ಲನೋ ಅವನು ವೇದವನ್ನು ಬಲ್ಲನು. ಏಕೆಂದರೆ ಆ ವೃಕ್ಷದ ಮೂಲವಿರುವುದು ಶಾಶ್ವತ ಬ್ರಹ್ಮ ಚೈತನ್ಯದಲ್ಲಿ ಎಂದು ಅವನು ಬಲ್ಲನು.
ಆ ಮರದ ಕೊಂಬೆಗಳು ಮೇಲಕ್ಕೂ ಕೆಳಗೂ ಚಾಚಿಕೊಂಡಿವೆ. ಆ ಮರಕ್ಕೆ "ಸತ್ವ, ರಜಸ್ಸು, ತಮಸ್ಸು" ಗಳೆಂಬ ಗುಣಗಳೇ ಗೊಬ್ಬರ. ಭೋಗ್ಯ ವಿಷಯಗಳೇ ಅದರ ಚಿಗುರೆಲೆ. ಅದರ ಬಿಳಲು ಬೇರುಗಳು ಮನುಷ್ಯಲೋಕದಲ್ಲಿ ಪಾಶಗಳಾಗಿ ಹಬ್ಬಿಕೊಂಡಿವೆ.
ಸಂಸಾರಕ್ಕೂ ಅಶ್ವತ್ಥ ಮರಕ್ಕೂ ಇರುವ ಸಮಾನತೆ - ಬಹುಕಾಲಿಕತ್ವ, ಬಹುವಿಸ್ತೃತತ್ವ, ಬಹುಗ್ರಂಥಿಲತ್ವ, ಬಹುಪೋಷಕತ್ವ.
ಅಶ್ವತ್ಥವು ಅದೃಶ್ಯ ಬ್ರಹ್ಮದ ದ್ರಶ್ಯ ಪ್ರತೀಕ. ಈ ಭಾವನೆಯಿಂದಲೇ ಸಮಸ್ತ ಹಿಂದುಗಳೂ ಅದನ್ನು ಪವಿತ್ರವೆಂದು ನಂಬಿ ಪೂಜೆ ಪ್ರದಕ್ಷಿಣೆ ಮಾಡುವುದು. (or as westeners put "Worshipping Trees, stocks and stones")
ಮೇಲಿನ ವಿವರಣೆಯಲ್ಲಿ "ವೇದಗಳು ಆ ವೃಕ್ಷದ ಎಲೆಗಳು" ಎಂದು ಹೇಳಿದ್ದರೆ. ಇದರ ಅರ್ಥ ತಿಳಿದುಕೊಳ್ಳೋಣ. ಎಲೆಗಳು ವೃಕ್ಷವನ್ನು ಕಾಪಾಡುವು ಕೆಲಸವನ್ನು ಮಾಡುತ್ತದೆ. ಅದೇ ರೀತಿ ಸಂಸಾರಕ್ಕೆ ಧರ್ಮವು ಪೋಷಕ. ಆ ಧರ್ಮಕ್ಕೆ ಉಪಲಕ್ಷಣವೇ ವೇದ (ವೇದೋಖಿಲಂ ಧರ್ಮಮೂಲಂ). ಆದದ್ದರಿಂದ ಸಂಸಾರ ವೃಕ್ಷಕ್ಕೆ ಸಂರಕ್ಷಕವಾದದ್ದು ವೇದಶಾಸ್ತ್ರ ಪ್ರೇರಿತ ಧರ್ಮ.
ಕಡೆಯದಾಗಿ, ಗೀತೆಯ ಈ ೧೫'ನೆ ಅಧ್ಯಾಯದಲ್ಲಿ, ಅಶ್ವತ್ಥವನ್ನು ಕಡೆಯಬೇಕು ಎಂಬ ವಿವರಣೆ ಇದೇ. ಏನು ಇದರ ಅರ್ಥ? ಏಕೆ? ಹೇಗೆ?
ಇದಕ್ಕೆ ಒಂದೇ ವಸ್ತುವಿನ (ಆತ್ಮ) ಎರಡು ದಶೆಗಳನ್ನು (ಜೀವಾತ್ಮ, ಪರಮಾತ್ಮ) ತಿಳಿದಿದ್ದರೆ ಅರ್ಥ ಮಾಡಿಕೊಳ್ಳಲು ಸುಲಭ. ಈ ಅಂಕಣವನ್ನು ತಿಳಿಯುವುದಕ್ಕಾಗಿ ಈ ಎರಡನ್ನು - Kinetic Energy and Potential Energy, respectively, ಎಂದು ಅರ್ಥೈಸಿ ಮುಂದುವರಿಸೋಣ. ಮುಂದಿನ ಅಂಕಣದಲ್ಲಿ ಇದರ ಬಗ್ಗೆ ವಿವರವಾಗಿ ಬರೆಯುತ್ತೇನೆ (ಅಥವಾ "copy" ಮಾಡುತ್ತೇನೆ). ಈ ಎರಡರಲ್ಲಿ ಸಂಸಾರ ಸಂಪರ್ಕವಿರುವುದು ಜೀವ ದಶೆಗೆ. ಸಂಸಾರ ವೃಕ್ಷದೊಳಗೆ ಜೀವ ಸೇರಿಕೊಂಡಿದೆ. ಆ ವೃಕ್ಷದ ಮೂಲ ಪರಮೊತ್ತಮ ಸ್ಥಾನದಲ್ಲಿ, ಅದು ಬ್ರಹ್ಮವಸ್ತು ಹಾಗು ಪೂಜ್ಯವಾದದ್ದು. ಜೀವವು ಮೇಲಕ್ಕೆ ಹತ್ತಿ ಆ ಮೇಲ್ಭಾಗವನ್ನು ಸೇರಿಕೊಂಡರೆ ಆಗ ಆ ಮರದ ಹುಳಿಕಹಿಗಳಿಂದ, ಅದರ ಕೊಳೆನಾತಗಳಿಂದ, ಕ್ರಿಮಿ ಕೀಟಗಳಿಂದ, ಜೀವಕ್ಕೆ ಬಿಡುಗಡೆ. ಅದೇ ಮೋಕ್ಷ - ಅದನ್ನು ವಿವರಿಸಲೇ (ಮೇಲ್ಭಾಗವನ್ನು ಸೇರುವ ಕಾರ್ಯ) ಆ ವೃಕ್ಷವನ್ನು ಕಡಿಯಬೇಕು ಎಂದಿರುವುದು.
ಈ ಮರವನ್ನು ಕಡೆಯುವ ಕೊಡಲಿ - "ಅಸಂಗ" , ಅದೇ ಅಭಿಮಾನ ತ್ಯಾಗ, ಅದೇ ಮಮತಾತ್ಯಾಗ. ಆ ಕೊಡಲಿಯಿಂದ ಕೊಂಬೆಯನ್ನು ಕಡಿದು, ಆ ಪೊದೆ ಪಂಜರದಲ್ಲಿ ಕೊಂಡಿ ಮಾಡಿಕೊಂಡು ಅದರ ಮೂಲಕ ಹೊರಕ್ಕೆ ಹೊರಟು ಬ್ರಹ್ಮಾನುಭವ ಪದವಿಗೆ ದಾರಿ ಮಾಡಿಕೊಳ್ಳತಕ್ಕದ್ದು. "ಅಸಂಗ" ವು ಸರ್ವೋತ್ಕೃಷ್ಟ ಧರ್ಮ. ಆ ಧರ್ಮ ಪಾಲನೆಯಿಂದ ಕೊಂಬೆ ರೆಂಬೆಗಳು ನಮಗೆ ಪ್ರತಿಬಂಧಕಗಳಾಗದೆ ಅನುಕೂಲಗಳಾಗುತ್ತವೆ. ಅದರ ಮೂಲಕವೇ ನಾವು ಮೂಲವನ್ನು ಕಾಣಲು ಸಾಧ್ಯ.
"ಅಸಂಗ" ಎಂದರೆ: ಇದು ನನ್ನದಲ್ಲ, ಇದು ನನ್ನ ಭೋಗಕ್ಕೆ ಬೇಡ, ಇದರಿಂದ ನನ್ನ ಶೋಧನ ಚಿಕಿತ್ಸೆಯಾಗಲಿ. ಇದನ್ನು ಪಾಲಿಸುವುದೇ ಬ್ರಹ್ಮಾನ್ವೇಷಣೆಯ ದಾರಿ.
ಸಾರಂಶ:
೧. ಆ ಮರದ ಬೇರು ಮೂಲ ಮೇಲುಗಡೆ ಎಲ್ಲೂ! - ಸರ್ವೋನ್ನತ ಭಾಗದಲ್ಲಿ ಬುಡದ ಬೇರು
೨. ಕೊಂಬೆರೆಂಬೆಗಳು ಕೆಳಗಡೆ ನಮಗೆಟುಕುವಂತೆ - ಅಧೋಭಾಗದಲ್ಲಿ ಕೊಂಬೆದಳು
೩. ತ್ರಿಗುಣಗಳು ಅದಕ್ಕೆ ಗೊಬ್ಬರ.
೪. ಚಿಗುರುಗಳು ವಿಷಯಪ್ರವಾಲಾ : - ಹೊಸಹೊಸ ಭೋಗ ವಿಷಯಗಳು ವಿಧವಿಧವಾದ ಆಶೆಗಳು.
೫. ಬಿಳಲುಗಳು "ಕರ್ಮಾನುಬಂಧೀನಿ" (ನಮ್ಮನ್ನು ನಮ್ಮ ಕರ್ಮಗಳಿಂದಲೇ ಕಟ್ಟಿ ಹಾಕುವುದು) ಕ್ರಮವನ್ನು ಅನುಸರಿಸಿಕೊಂಡು ಹೋಗುತ್ತಿರುತ್ತವೆ.
೬.ಯಾವ ಬ್ರಹ್ಮವಸ್ತುವು ತತ್ವದಲ್ಲಿ - ಸ್ವಸ್ವರೂಪದಲ್ಲಿ ಸ್ಥಿರವೋ, ಏಕಾಕಾರವೋ , ನಿರ್ವಿಕಾರವೋ, ಅದು ಕಾರ್ಯದಶೆಯಲ್ಲಿ ಚಲನಶೀಲ, ಬಹುರೂಪಿ, ಸಂಸಾರವಿಕಾರಿ - ಅದಕ್ಕಾಗಿಯೇ ಅದನ್ನು "ಊರ್ಧ್ವಮೂಲಂ" ಎಂದಿರುವುದು.
೭. ಅಶ್ವತ್ಥವನ್ನು ಕಡಿಯಬೇಕು - ಅಸಂಗಶಸ್ತ್ರೇಣ
Wednesday, July 1, 2009
Subscribe to:
Post Comments (Atom)
No comments:
Post a Comment