Saturday, February 9, 2008

Samataa Tatva vichaara

“ಸಮ” ಎಂಬ ಪದವು ಅತ್ಯಂತ ದುರುಪಯೋಗವಾಗಿರುವ ಪದಗಳಲ್ಲಿ ಒಂದು. ಸಮತೆ ಎಂದರೆ ಯಾವ ಯಾವ ಜೀವಕ್ಕೆ ಯಾವ ಯಾವುದು “ಹಿತ”ವೋ ಅದನ್ನು ಒದಗಿಸುವುದು.

ಸಮ, ಸಮತಾ, ಸಾಮ್ಯ, ಸಮಾನ, ಸಮದರ್ಶಿ: ಈ ಮಾತುಗಳು ಎರಡು ಅರ್ಥಗಳಲ್ಲಿ ಉಪಯೋಗಿಸಲ್ಪಟ್ಟಿದೆ. ಮೊದಲನೆಯದು: ಲಾಭ-ನಷ್ಟ, ಪ್ರಿಯ-ಅಪ್ರಿಯ, ಶತ್ರು-ಮಿತ್ರ ಮೊದಲಾದ ದ್ವಂದ್ವಗಳಿಂದ ಮನೋವಿಕಾರಗಳನ್ನು ಪಡೆಯದೆ ಇರುವ ಸ್ಥಿತಿ- ಸಮತ್ವ. ಎರಡನೆಯದು: ಆತ್ಮ ವಸ್ತು ಎಲ್ಲಾ ಪ್ರಾಣಿಗಳಲ್ಲೂ ಇದೆ ಎಂಬ ಅಭಿಪ್ರಾಯ.

ಅಂತಸ್ಸಮತೆ, ಬಹಿಸ್ತಾರತಮ್ಯ-. ನಮ್ಮಲ್ಲಿ ಹೆಚ್ಚು ಜನರಲ್ಲಿ ಇದರ ವಿರುದ್ದ ರೂಪ ಹೆಚ್ಚು (ಮನಸ್ಸಿನೊಳಗಡೆ ಎಲ್ಲರೂ ಸಮಾನರೆಂಬ ಭಾವನೆ ಇಲ್ಲ). ಆದ್ದರಿಂದ ಸಾಮಾನ್ಯವಾಗಿ ನಮ್ಮೆಲ್ಲರ ಒಳ್ಳೆಯತನವೂ ಈ ರೀತಿಯದೇ (ಕೆಲವರಿಗೇನೋ ಒಳ್ಳೆಯದಾಗಬಹುದು, ಅದರ ಜೊತೆಯಲ್ಲಿಯೇ ಇನ್ನೆಷ್ಟೋ ಮಂದಿಗೆ ಕೆಡಕೇ ಆಗಬಹುದು). – ಮುಖ್ಯವಾಗಿ ಅಂತರ್‌ಭಾವದಲ್ಲಿ ಸಮತೆ, ಬಹಿಷ್ಕ್ರಿಯೆಯಲ್ಲಿ ತಾರತಮ್ಯವಿವೇಕ – ಇವೆರಡೂ ಪರಸ್ಪರ ಸಾರ್ಥಕಕಾರಿಗಳಾದ ಸೂತ್ರಗಳು.

ಸಮದರ್ಶನ ಇಬ್ಬರನ್ನು ಅಪೇಕ್ಷಿಸುತ್ತದೆ: ಒಬ್ಬ ದರ್ಶಕ, ಇನ್ನೊಬ್ಬ ದೃಷ್ಟ. ದರ್ಶಕನ ಸಮದರ್ಶಿತ್ವದಿಂದ ದೃಷ್ಟಾನಿಗೆ ಹಿತವಾಗಬೇಕು. ಏಕಾಪ್ರಕಾರವಾಗಿ ಉಪಕಾರದೃಷ್ಟಿ ಇದ್ದರೆ ಅದೇ ಸಮದರ್ಶನ. ಜ್ಞಾನದ ಲಕ್ಷಣವೇ ಸಮದರ್ಶನ. ಆತ್ಮದರ್ಶನ ಮಾಡಿದವನ ಮುಖ್ಯಲಕ್ಷಣ ಸಮದರ್ಶಿತ್ವ.

ಆತ್ಮ ಸಮಕ್ಷತೆ ನಮ್ಮ ಅನುಭವಕ್ಕೆ ಬಂದಿದೆಯೇ ಇಲ್ಲವೇ? ಇದನ್ನು ನಾವು ನಾವೇ ಕಂಡುಕೊಳ್ಳಬಹುದು. ಯಾರನ್ನು ಜನ “ಸಣ್ಣ”ವನೆನ್ನುತ್ತದೆಯೋ, “ನೀಚ”ನೆನ್ನುತ್ತದೆಯೋ, “ಕೀಳು” ಎನ್ನುತ್ತದೆಯೋ, ಅವನು ಬಂದು ನಮ್ಮ ಪಕ್ಕದಲ್ಲಿ ಕುಳಿತಾಗ ನಮ್ಮ ಮುಖ ಯಾವ ಭಾವವನ್ನು ತಾಳುತ್ತದೆ? ನಮಗೆ ಅಪಕಾರ ಮಾಡಿದವನು ಬಂದು ಪಕ್ಕದಲ್ಲಿ ಕುಳಿತಾಗ ನಮ್ಮ ಮನಸ್ಸು ಏನೆನ್ನುತ್ತದೆ?, ಅಧಿಕಾರವಂತನೋ ಕೀರ್ತಿವಂತನೋ ನಮ್ಮ ಬಳಿ ಸುಳಿದಾಗ ನಾವು ಹೇಗೆ ನಡೆದುಕೊಳ್ಳುತ್ತೆವೋ? ಆ ಅಂತಸ್ತು, ದರ್ಜೆ, ಪ್ರತಿಷ್ಠೆಗಳಿಂದಾದ ಬಹಿರ್ಭೇಧಗಳನ್ನು ನಮ್ಮ ಮನಸ್ಸು ಗಣನೆಗೆ ತೆಗೆದುಕೊಳ್ಳುತ್ತದೆ. ಹಾಗಾಗದೇ ಎಲ್ಲರನ್ನೂ ಏಕಪರಿಮಾಣದ ಆತ್ಮ ಪ್ರೀತಿಯಿಂದ ನೋಡಿದರೆ ಆಗ ಸಮತೆಯನ್ನಾಚರಿಸಿದಂತಾಗುತ್ತದೆ.

No comments: