ಹವ್ಯಕರ ಮದುವೆ ಎಂಬುದು ಸರಳವಾದ, ಕಡಿಮೆ ಖರ್ಚಿನ ಮದುವೆಯಾಗಿತ್ತು ಎಂದರೆ ತಪ್ಪಲ್ಲ. ಮನೆಯಂಗಳದಲ್ಲಿ ಕಂಗಿನ ಕಂಬಗಳನ್ನು ಹಾಕಿ ತೆಂಗಿನ ಮರದ ಒಣ ಮಡಲನ್ನು ಹೆಣೆದು ಮಾಡಿದ ತಟ್ಟಿಗಳನ್ನು ಹೊದೆಸಿ ಚಪ್ಪರ ಮಾಡುತ್ತಿದ್ದರು. ಅಂಗಳವನ್ನು ಚೊಕ್ಕಟಮಾಡಿ ಸೆಗಣಿ ಸಾರಿಸುತ್ತಿದ್ದರು. ಲಭ್ಯವಿರುವ ಕಂಬ ಹಾಕಿ, ಜಮಖಾನ ಹೊದೆಸಿ ಮಧ್ಯಭಾಗಕ್ಕೊಂದು ತೆಂಗಿನ ಕಾಯಿ, ಎಲೆ ಅಡಿಕೆ ಕಟ್ಟಿದರೆ ಮಂಟಪ ತಯಾರಾಗುತ್ತಿತ್ತು. ವರದಕ್ಷಿಣೆ, ಚಿನ್ನ, ಬೆಳ್ಳಿ ಎಂಬ ಖಡ್ದಾಯದ ಹೊರೆಗಲಿಲ್ಲ. ಹೆತ್ತವರು ಯಥಾಶಕ್ತಿ ತಮ್ಮ ಮಗಳಿಗೆ, ಅಳಿಯನಿಗೆ ಉಡುಗೊರೆ ಕೊಟ್ಟರೆ ಅದೇ ತೃಪ್ತಿ ತರುತ್ತಿತ್ತು.
ಅಂದಿನ ಕಾಲದ ಮದುವೆಯ ಊಟವೆಂದರೂ ಹಾಗೆ. ಸರಳವಾದ, ಆಢಂಬರವಿಲ್ಲದ ಪಾಯಸದ ಸಿಹಿಯೂಟ. ಮದುವೆಯ ಹಿಂದಿನ ದಿನವೇ ನೆರೆಕರೆಯವರು, ಹತ್ತಿರ ಸಂಬಂಧಿಗಳು ಮದುವೆ ಮನೆಗೆ ಬಂದು ಸೇರುತ್ತಿದ್ದರು. ತಮ್ಮಲ್ಲಿ ಬಳಸುತ್ತಿದ್ದ ಬಾಳೆಕಾಯಿ, ಹಲಸು, ಚೀನೀಕಾಯಿ, ಸೌತೆಕಾಯಿ ಅಲ್ಲದೆ ಹಾಲು ಮಜ್ಜಿಗೆಗಳನ್ನು ತರುತ್ತಿದ್ದರು (ಬೂದುಗುಂಬಳ ಖಂಡಿತವಾಗಿಯೂ ತರುತ್ತಿರಲಿಲ್ಲ - ಅದು ಅಪರಕ್ರಿಯೆಗಳಿಗೆ ಸೀಮಿತವೆಂಬ ನಂಬಿಕೆ).
ಪುರೋಹಿತರು ರಾತ್ರಿ ಗಣಪತಿ ಪೂಜೆ ಮಾಡಿ ನಂತರ ಮೇಲಡಿಗೆಯವರು (ಅಡುಗೆಯ ಮುಖ್ಯಸ್ತರು) ಬಾಳೆಕಾಯಿ ಹೆಚ್ಚಿ ಕಂಚಿನ ಉರುಳಿಯಲ್ಲಿ ಹಾಕುತ್ತಿದ್ದರು. ಮಗುಚಿ ಬಿದ್ದ ಹೋಳುಗಳಿಗೆ ಅನುಸಾರವಾಗಿ ಮರುದಿನ ಮದುವೆ ಕಾರ್ಯಕ್ರಮಕ್ಕೆ ಎಷ್ಟುಜನ ಸೇರಬಹುದೆಂಬ ಅಂದಾಜು ಮಾಡುತ್ತಿದ್ದರು . ಅಂದು ರಾತ್ರಿ ಪಾಯಸದ ಊಟವಿರುತ್ತಿತ್ತು. ಹೆಚ್ಚಾಗಿ ಕಡಲೆಬೇಳೆ ಪಾಯಸವನ್ನೇ ಮಾಡುತ್ತಿದ್ದರು . ಊಟದ ನಂತರ ಗಂಡಸರು ಕಳಕಟ್ಟಿ ಕುಳಿತು ತರಕಾರಿ ಹೆಚ್ಚುವುದು, ಬಾಳೆಲೆ ಕಟ್ಟು ಕಟ್ಟಿಡುವುದು, ಇತ್ಯಾದಿ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದರು. ಮಧ್ಯೆ ಮಧ್ಯೆ ಚಹಾ ಕಾಫಿಯ ಸರಬರಾಜು ಇರುತ್ತಿತ್ತು.
ಆ ಕಾಲದಲ್ಲಿ ಬೆಳಗ್ಗಿನ ಉಪಹಾರವೂ ಸರಳವಾಗಿರುತ್ತಿತ್ತು . ಅವಲಕ್ಕಿ, ಉಪ್ಪಿಟ್ಟು, ಚಹಾ, ಕಾಫಿ, ಕಷಾಯ, ಹಾಲು-ನೀರು ಇವಿಷ್ಟೇ. ಅನಂತರ ಬಾಳೆಹಣ್ಣು ಕೊಡುವುದು ಪ್ರಾರಂಭವಾಯಿತು. ದಿಬ್ಬಣಿಗರು (ಗಂಡಿನ ಕಡೆಯವರು) ಬಂದಾಗ ಕೈ ಕಾಲು ತೊಳೆಯಲು ನೀರು ಕೊಟ್ಟು ಅವರನ್ನು ಸಭೆ ಮಾಡಿ ಕುಳ್ಳರಿಸಿ ಬೆಲ್ಲ-ನೀರು, ಎಳನೀರು ಕೊಟ್ಟು "ಸರ್ವರೂ ಕ್ಷೇಮವಾಗಿ ಬಂದಿರೋ" ಎಂದು ವಿಚಾರಿಸಿಕೊಂಡು ಸ್ವಾಗತಿಸುತ್ತಿದ್ದರು. ಅನಂತರ ದಿಬ್ಬಣಿಗರಿಗೂ ಉಪಹಾರದ ವ್ಯವಸ್ತೆ ಹಿಂದಿನ ರೀತಿಯಲ್ಲೇ ನಡೆಯುತ್ತಿತ್ತು.
ಹಿಂದಿನ ಕಾಲದಲ್ಲಿ ಮಧ್ಯಾಹ್ನದ ಊಟಕ್ಕೆ ನಾಲ್ಕು ಬಗೆಯ ಪಲ್ಯ, ಕೋಸಂಬರಿ, ಮೆಣಸ್ಕಾಯಿ, ಅವೀಲು, ಚಿತ್ರಾನ್ನ, ಸಾರು, ಸಾಂಬಾರು, ಮಜ್ಜಿಗೆಹುಳಿ, ಒಂದು ವಿಧದ ಪಾಯಸ, ಮಜ್ಜಿಗೆ ನೀರು, ಉಪ್ಪಿನಕಾಯಿ, ಉಪ್ಪು, ಬೆಳ್ತಿಗೆ ಅಕ್ಕಿಯ ಅನ್ನ ಇರುತ್ತಿತ್ತು. ಐವತ್ತರ ದಶಕದ ಅಂದಾಜಿಗೆ ಕರಿದ ಹಪ್ಪಳ, ಬೆಲ್ಲದಿಂದ ಮಾಡಿದ ಸುಕ್ಕಿನುಂಡೆ ಎಂಬ ಸಿಹಿ ಕೆಲವು ಕಡೆ ಪ್ರಾರಂಭವಾಗಿತ್ತು. ಕ್ರಮೇಣ, ಸಿರಿವಂತರ ಮದುವೆಗಳಲ್ಲಿ ಹೋಳಿಗೆ, ಲಾಡು, ಸಜ್ಜಿಗೆ ಲಾಡು, ಪ್ರಾರಂಭವಾಗಿತ್ತು. ಅರವತ್ತರ ದಶಕದಲ್ಲಿ, ರಾತ್ರಿಯ ಮದುವೆಯೊಂದರಲ್ಲಿ ಜನರೇಟರ್ ಹಾಕಿಸಿ 6 ಮುಡಿ ಕಡಲೆಬೇಳೆಯ ಹೋಳಿಗೆ (ಸುಮಾರು ೧೫,೦೦೦ ಕ್ಕೂ ಮೀರಿ) ಮಾಡಿಸಿದ ದಾಖಲೆ ಇದೆ. ಅನಂತರದ ಕಾಲದಲ್ಲಿ ಎರಡೆರಡು ವಿಧದ ಪಾಯಸಗಳು ಪ್ರಾರಂಭವಾದವು. ಸಕ್ಕರೆ ಹಾಕಿ ಮಾಡುವ ಶಾವಿಗೆ ಪಾಯಸ, ಸಬಕ್ಕಿ ಪಾಯಸ, ಅಕ್ಕಿ ಪಾಯಸಗಳೂ ಪ್ರಾರಂಭವಾದವು. ಕ್ರಮೇಣ ಇಡ್ಲಿ-ಸಾಂಬಾರು, ಚಟ್ನಿ, ಜೊತೆಗೊಂದು ಸಿಹಿ, ಮಧ್ಯಾಹ್ನದ ಊಟಕ್ಕೆ ಸಿಹಿಯ ಜೊತೆಗೊಂದು ಕರಿದ ತಾಡಿ ಹೀಗೆ ಹೊಸ ಹೊಸ ಪದಾರ್ಥಗಳು ಸೇರ್ಪಡೆಯಾಗ ತೊಡಗಿದವು. ಬೋಂಡ ಬಜ್ಜಿಗಳೂ ಕಾಣಿಸತೊಡಗಿದವು. ಚಿತ್ರಾನ್ನ ಮರೆಯಾಗತೊಡಗಿತು. ಕೋಸಂಬರಿ ಕಾಣೆಯಾಯಿತು. ಪುಲಾವ್, ಘೀರೈಸ್, ಗೊಜ್ಜು, ಕುರ್ಮಗಳು ಪ್ರಾರಂಭವಾಗತೊಡಗಿತು. ಪಲ್ಯಗಳ ಸಂಖ್ಯೆ ಕ್ರಮೇಣ ಎರಡಕ್ಕೆ ಸೀಮಿತವಾಯಿತು. ಅಡುಗೆಯಲ್ಲಿನ ಐಟಂಗಳು ಹೆಚ್ಚಾದಾಗ ಅಡುಗೆಯವರಿಗೆ ಕೆಲಸದ ಹೊರೆ ಹೆಚ್ಹಾಗಿ ಅವರ ಗೊಣಗುವಿಕೆ ಪ್ರಾರಂಭವಾಗತೊಡಗಿತಂತೆ.
೭೦ರ ದಶಕದಲ್ಲಿ ಮನೆಯಲ್ಲಿ ಚಪ್ಪರಹಾಕಿ ಮದುವೆ ಮಾಡುವುದು ಕಷ್ಟಕರವೆನಿಸತೊಡಗಿದುದರಿಂದ ಮದುವೆ, ಉಪನಯನಗಳನ್ನು ದೇವಸ್ಥಾನಗಳಲ್ಲಿ, ಹಾಲ್ ಗಳಲ್ಲಿ ಮದುವೆ ನೆರವೇರಿಸುವುದು ಪ್ರಾರಂಭವಾಯಿತು. ಇದೀಗ ಮನೆಯಂಗಳದಲ್ಲಿ ಮದುವೆಯಾಗುವುದು ಅಪರೂಪವೇ ಅನ್ನಿಸಿದೆ. ಕೆಲವು ಕಡೆ ಮಾತ್ರ ವಧುಗೃಹಪ್ರವೇಶದ ಕಾರ್ಯಕ್ರಮ ಮನೆಯಂಗಳದ ಚಪ್ಪರದಲ್ಲಿ ನಡೆಯುತ್ತಿದೆಯಷ್ಟೇ.
೨೦೦೦ನೇ ಇಸವಿಯ ಅಂದಾಜಿಗೆ ಬೆಳಗ್ಗಿನ ಉಪಹಾರಕ್ಕೆ ಚಪಾತಿ, ಪೂರಿ, ಇಡ್ಲಿ, ವಡೆ, ಪತ್ರೊಡೆಗಳು ಶುರುವಾದವು. ಜೊತೆಗೆ ಸಿಹಿ ಕೂಡ ಇರುತ್ತಿದ್ದವು. ಊಟಕ್ಕೆ ಎರಡೆರಡು ಸಿಹಿಗಳು ಇರುತ್ತಿದ್ದವು. ಅನಂತರದ ದಿನಗಳಲ್ಲಿ ಖರ್ಜೂರ ಪಾಯಸ, ಒಣ ದ್ರಾಕ್ಷಿಯ ಪಾಯಸ, ಬಾಳೆಹಣ್ಣಿನ ಪಾಯಸ, ಮ್ಯಾಕ್ರೋನಿ ಪಾಯಸಗಳೆಲ್ಲ ಸೇರ್ಪಡೆಗೊಂಡವು. ಅಲ್ಲೊಮ್ಮೆ ಇಲ್ಲೊಮ್ಮೆ ಫ್ರೂಟ್ ಸಾಲಡ್ ಗಳನ್ನು ಪಾಯಸದ ಜೊತೆಗೆ ರಸಾಯನದ ರೀತಿಯಲ್ಲಿ ಪ್ರಾರಂಭವಾದದ್ದು ಇದೆ.ಹಾಲ್-ಗಳಲ್ಲಿ ಮದುವೆ ಪ್ರಾರಂಭವಾದಾಗ ಸ್ವಾಭಾವಿಕವಾಗಿಯೇ ನೆರೆ ಕರೆಯವರು, ನೆಂಟರು ಹಿಂದಿನ ರಾತ್ರಿಯೇ ಹೋಗಿ ತರಕಾರಿ ಹೆಚ್ಚುವುದು ಕಡಿಮೆಯಾಗ ತೊಡಗಿದೆಯಲ್ಲದೆ ಊಟದ ಪಂಕ್ತಿಯಲ್ಲಿ ಬಡಿಸುವ ಕೆಲಸಕ್ಕೂ ಜನರ ಅಭಾವ ಉಂಟಾಯಿತು. ಬಂದವರಿಗೆ ಮದುವೆ ಮುಗಿಸಿ ವಾಹನವೇರಿ ತಮ್ಮ ಮನೆಗೆ ಹೋಗುವ ತರತುರಿಯಿಂದಾಗಿ ಬಡಿಸಲು ಸಮಯವಿಲ್ಲದಾಗ ತೊಡಗಿತು. ಆಗ ಅನಿವಾರ್ಯವಾಗಿ ಸುಧಾರಿಕೆಯವರು ಸಂಬಳ ಪಡೆದು ಕೆಲಸ ಮಾಡುವ ಪರಿಸ್ತಿತಿ ಉಂಟಾಯಿತು. ಪಂಕ್ತಿಯಲ್ಲಿ ಬಡಿಸುವ ಹೊರೆ ಕಡಿಮೆಯಾಗಲು 'ಬುಫ್ಫೆ' ಪದ್ಧತಿ ಮತ್ತು ಟೇಬಲ್ ಊಟದ ಪದ್ಧತಿ ಪ್ರಾರಂಭವಾಯಿತು. ಜೊತೆಗೇ, ಊಟದ ನಂತರ 'ಐಸ್-ಕ್ರೀಂ' ಕೊಡುವ ಹೊಸ ಕ್ರಮವೂ ಪ್ರಾರಂಭವಾಯಿತು. ಈಗ ಮಳೆಗಾಲ, ಚಳಿಗಾಲವೆನ್ನದೆ ಐಸ್-ಕ್ರೀಂ ಕೊಡುವುದು ಹೆಚ್ಚಿನ ಕಡೆ ಕಾಣಿಸುತ್ತದೆ. ಅದನ್ನು ಪಡೆಯಲು ನೂಕು-ನುಗ್ಗಲು, ಕಿತ್ತಾಟ, ಕಾದಾಟಗಳು ಕಾಣಿಸುವಾಗ 'ಛೆ .. ಇಂತಹದ್ದೆಲ್ಲಾ ನಮಗೆ ಬೇಕಿತ್ತೆ' ಎನಿಸುವುದೂ ಇದೆ.
ಇತ್ತೀಚಿಗೆ ಪೇಟೆ ಪಟ್ಟಣಗಳಲ್ಲಿ 'ಕೇಟರಿಂಗ್' ಮೂಲಕ, ಗುತ್ತಿಗೆದಾರರಿಗೆ ಹಣತೆತ್ತಿ ಅಡುಗೆ ಜವಾಬ್ದಾರಿ ವಹಿಸಿ ತಮ್ಮ ಹೊರೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರೆ, ಪಗಡಿ, ಗ್ಯಾಸ್, ಒಲೆ, ತಕಾರಿ, ಹಾಲು, ಹಣ್ಣು, ಇತ್ಯಾದಿ ಗಳನ್ನೂ ತಂದು ತಮ್ಮ ಕೆಲಸ ನೆರವೇರಿಸಿಕೊಡುತ್ತಾರೆ. ಮುಹೂರ್ತಕ್ಕೆ ಕೆಲವೇ ಜನರಿದ್ದರೂ ಊಟದ ಹೊತ್ತಿಗೆ ಧಾರಾಳ ಜನ ಬಂದು ನಿಂತೋ ಕುಳಿತೋ ಹರಟುತ್ತಲೋs ಉಂಡು ಐಸ್-ಕ್ರೀಂ ತಿಂದು ಬಂದಷ್ಟೇ ಧಾವಂತದಿಂದ ಜನ ಹೋಗಿಬಿಡುತ್ತಾರೆ. ಒಟ್ಟಿನಲ್ಲಿ ಸರಳವಾಗಿ, ಬಂಧು, ಬಾಂಧವರ ಸಹಕಾರದಿಂದ ಮನೆಯಂಗಳದಲ್ಲಿ ಸರಳವಾಗಿ ಸಾಗುತ್ತಿದ್ದ ಮದುವೆಯ ಮಂಗಳಕಾರ್ಯ ಇಂದು ಆಡಂಬರದ, ಧಾವಂತದ, ದುಬಾರಿಯ, ಬಡವರಿಗೆ ಅನಿವಾರ್ಯ ಹೊರೆಯೆನಿಸುವ ಕಾರ್ಯಕ್ರಮವಾಗಿ ರೂಪಗೊಂಡಿರುವುದು ವಿಪರ್ಯಾಸದ ಸಂಗತಿ.
No comments:
Post a Comment